ಮಡಿಕೇರಿ ಆ.22 : ಸೆಸ್ಕ್ ಜಾಗೃತ ದಳದಿಂದ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಕಾಡಂಚಿನ ಗ್ರಾಮದ ನಿವಾಸಿಗಳಿಗೆ ತೋಟದ ಬೇಲಿಗಳಿಗೆ ಅಕ್ರಮ ವಿದ್ಯುತ್ ಬಳಕೆ ಕುರಿತು ಜನ ಜಾಗೃತಿ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೊಲೀಸ್ ನಿರೀಕ್ಷಕ ಮಹದೇವ ಸ್ವಾಮಿ, ಬೇಲಿಗಳಿಗೆ ವಿದ್ಯುತ್ ಹರಿಸುವುದು ಕಾನೂನು ಅಡಿಯಲ್ಲಿ ಅಪರಾಧವಾಗಿದೆ. ಇಂತಹ ಕೃತ್ಯಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ವಿವರಿಸಿದರು.
ಸೆಸ್ಕ್ ಜಾಗೃತ ದಳದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಡಿ. ತಿಲಕ್ ಅವರು ಮಾತನಾಡಿ, ಕಾಡು ಪ್ರಾಣಿಗಳ ಹಾವಳಿ ತಡೆಗೆ ಬೇಲಿಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿರುವ ಪ್ರಕರಣಗಳು ಕೆಲವು ಕಡೆಗಳಲ್ಲಿ ಕಂಡು ಬಂದಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಕೃತ್ಯಗಳಿಗೆ ಯಾರು ಕೈ ಹಾಕಬಾರದೆಂದು ಮನವಿ ಮಾಡಿದರು. ಅರಣ್ಯ ಇಲಾಖೆ ಡಿಆರ್‍ಎಫ್‍ಓ ಶ್ರೀನಿವಾಸ್ ಮಾತನಾಡಿ, ಕಾಡಾನೆ ಹಾವಳಿ ತಡೆಗೆ ಕೆಲವರು ಬೇಲಿಗಳಿಗೆ ವಿದ್ಯುತ್ ಹರಿಸುತ್ತಿದ್ದಾರೆ. ಇದರಿಂದ ಕಾಡಾನೆಗಳು ಸಾವನ್ನಪ್ಪಿದ ಪ್ರಕರಣಗಳು ನಡೆದಿದೆ. ಇದು ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅರಣ್ಯ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ವಿರಾಜಪೇಟೆ ಸೆಸ್ಕ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಕುಮಾರ್ ಅವರುಗಳು ಮಾತನಾಡಿ ಜನ ಜಾಗೃತಿ ಮೂಡಿಸಿದರು.
ಸೆಸ್ಕ್ ಜಾಗೃತ ದಳದ ಪೊಲೀಸ್ ವರಿಷ್ಟಾಧಿಕಾರಿ ರಶ್ಮಿ ಬಿ.ಪರಡ್ಡಿ, ಡಿವೈಎಸ್‍ಪಿ ಧರ್ಮೇಂದ್ರ, ಸೆಸ್ಕ್ ಜಾಗೃತ ದಳದ ಕಾರ್ಯಪಾಲಕ ಅಭಿಯಂತರ ತಬಸುಮ್ ಅಫ್ಜಾ ಬಾನು ಅವರುಗಳು ಮಾರ್ಗದರ್ಶನದಲ್ಲಿ ಜನ ಜಾಗೃತಿ ಸಭೆ ನಡೆಸಲಾಯಿತು.









