ಮಡಿಕೇರಿ ಆ.22 : ಜನರಲ್ ತಿಮ್ಮಯ್ಯ ಪ್ರತಿಮೆ ಪುನರ್ ಸ್ಥಾಪನೆ ಕುರಿತು ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು. ಪ್ರತಿಮೆಯನ್ನು ಮರುಸ್ಥಾಪಿಸುವ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ನಿರ್ಧಾರ ಕೈಗೊಳ್ಳಲಾಯಿತು.
ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಪುನರ್ ಸ್ಥಾಪನೆ ಸಂಬಂಧ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಉಪಸ್ಥಿತಿಯಲ್ಲಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಸಭಾಂಗಣದಲ್ಲಿ ಸುದೀರ್ಘ ಸಮಾಲೋಚನಾ ಸಭೆ ಮಂಗಳವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣ ಸಂಬಂಧ ಎಲ್ಲರ ಸಹಕಾರ ಪಡೆಯುವ ನಿಟ್ಟಿನಲ್ಲಿ ಸಭೆ ಆಹ್ವಾನಿಸಲಾಗಿದೆ. ಸದ್ಯ ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಮೆ ನಿರ್ಮಾಣದ ಖರ್ಚು ವೆಚ್ಚವನ್ನು ಭರಿಸಲಾಗುವುದು ಎಂದು ಅವರು ಹೇಳಿದರು.
ಹೊಸ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈಗಿರುವ ಮಾದರಿಯಲ್ಲಿ ಪ್ರತಿಮೆ ಪರಿಪೂರ್ಣತೆ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ. ಜೊತೆಗೆ ಕಾಲಾವಕಾಶ ಬೇಕಿದೆ. ಆದ್ದರಿಂದ ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಆದಷ್ಟು ಶೀಘ್ರ ಪ್ರತಿಮೆ ಪುನರ್ ಸ್ಥಾಪಿಸುವುದು ಅತ್ಯಗತ್ಯವಾಗಿದೆ ಎಂದು ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಿರುವ ಸ್ಥಳದ ಬದಲಾವಣೆ ಇಲ್ಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಅಭಿಪ್ರಾಯ ನೀಡುವಂತಾಗಬೇಕು ಎಂದರು.
ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿಯೇ ಕಾರ್ಯಚಟುವಟಿಕೆ ನಡೆಯಲಿದ್ದು, ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಶಾಸಕರು ಸಲಹೆ ನೀಡಿದರು.
ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ಮಾತನಾಡಿ ಈಗಿರುವ ಪ್ರತಿಮೆಯನ್ನು ತ್ವರಿತವಾಗಿ ಪುನರ್ ಸ್ಥಾಪಿಸಬೇಕು ಎಂದು ಸಲಹೆ ಮಾಡಿದರು.
50 ವರ್ಷಗಳ ಹಿಂದೆ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿತ್ತು. ಜನರಲ್ ತಿಮ್ಮಯ್ಯ ಅವರ 30-35 ಫೋಟೋಗಳನ್ನು ಸಂಗ್ರಹಿಸಿ ಅದರಲ್ಲಿ ಎತ್ತರದ ಫೋಟೋವನ್ನು ಆಯ್ಕೆ ಮಾಡಿ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಈ ರೀತಿಯ ಪ್ರತಿಮೆ ನಿರ್ಮಿಸುವುದು ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಹೊಸ ಪ್ರತಿಮೆ ಬದಲಾಗಿ, ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ಸ್ಥಾಪಿಸಬೇಕಿದೆ ಎಂದು ಎಂ.ಸಿ.ನಾಣಯ್ಯ ಅವರು ಹೇಳಿದರು.
ಪ್ರತಿಮೆ ನಿರ್ಮಾಣ ಸಂಬಂಧ ಜಿಲ್ಲಾಡಳಿತ, ನಗರಸಭೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಸಂಚಾರ ದಟ್ಟಣೆ, ನಿಯಂತ್ರಣ ಸಂಬಂಧ ಪೊಲೀಸ್ ಇಲಾಖೆ ಅಗತ್ಯ ಕ್ರಮವಹಿಸಬೇಕು. ಒಂದು ತಿಂಗಳೊಳಗೆ ಪ್ರತಿಮೆ ಪುನರ್ ಸ್ಥಾಪಿಸಬೇಕು ಎಂದು ಎಂ.ಸಿ.ನಾಣಯ್ಯ ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಪ್ರತಿಮೆ ನಿರ್ಮಾಣ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಪ್ರತಿಮೆ ದುರಸ್ತಿ ಸಂಬಂಧ ಅಂದಾಜು ಪಟ್ಟಿ ತಯಾರಿಸಲಾಗಿದೆ. ಹಾಗೆಯೇ ಪ್ರತಿಮೆ ಜಾಗದಲ್ಲಿ ಪೌಂಡೇಶನ್ ನಿರ್ಮಾಣ ಮತ್ತಿತರ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅವರು ಮಡಿಕೇರಿ ನಗರಸಭೆ ವ್ಯಾಪ್ತಿಗೆ ಜಾಗ ಬರಲಿದೆ. ಹಾಗಾಗಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಸಂಚಾರ ನಿಯಂತ್ರಣ ಬಗ್ಗೆ ಕ್ರಮವಹಿಸಬೇಕಿದೆ ಎಂದು ತಿಳಿಸಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಎಂ.ಪಿ.ಮುತ್ತಪ್ಪ ಅವರು ಮಾತನಾಡಿ ಈಗಿರುವ ಜಾಗದಲ್ಲಿಯೇ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಪ್ರಮುಖರಾದ ತೆನ್ನಿರಾ ಮೈನಾ ಅವರು ಮಾತನಾಡಿ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು, ಈಗಿನ ಪ್ರತಿಮೆ ಭಗ್ನವಾಗಿದೆ. ಆದ್ದರಿಂದ ಹೊಸ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.
ಮತ್ತೊಬ್ಬ ಪ್ರಮುಖರಾದ ಪುಲಿಯಂಡ ಜಗದೀಶ್ ಅವರು ಮಾತನಾಡಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಿ 50 ವರ್ಷ ಕಳೆದಿರುವುದರಿಂದ ಹೊಸ ಪ್ರತಿಮೆ ನಿರ್ಮಾಣ ಮಾಡುವುದು ಸೂಕ್ತ ಎಂದರು.
ಪ್ರಮುಖರಾದ ಮಂಜು ಚಿಣ್ಣಪ್ಪ ಅವರು ಮಾತನಾಡಿ ಪ್ರತಿಮೆಗೆ ಮೂರು ನಾಲ್ಕು ಕಡೆ ರಂದ್ರವಾಗಿದ್ದು, ಭಗ್ನವಾದ ಪ್ರತಿಮೆಯನ್ನು ಪುನರ್ ಸ್ಥಾಪಿಸಬಹುದೇ ಎಂಬ ಬಗ್ಗೆ ಯೋಚಿಸಬೇಕಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸತೀಶ್ ಅವರು ಪ್ರತಿಮೆ ಶೀಘ್ರ ಪುನರ್ ಸ್ಥಾಪನೆ ಸಂಬಂಧ ಸಮಿತಿ ರಚಿಸಬೇಕು. ಹೊಣೆಗಾರಿಕೆಯನ್ನು ಹಂಚಬೇಕು ಎಂದು ಅವರು ಸಲಹೆ ಮಾಡಿದರು.
ಪ್ರಮುಖರಾದ ಚೆಯ್ಯಂಡ ಸತ್ಯ ಅವರು ಮಾತನಾಡಿ ಈಗಿರುವ ಪ್ರತಿಮೆ ಉತ್ತಮವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದರು.
ಪ್ರಮುಖರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಮಡಿಕೇರಿಯ ವಿವಿಧ ವೃತ್ತಗಳಲ್ಲಿ ‘ಸಿಗ್ನಲ್ ಲೈಟ್’ ಅಳವಡಿಸಬೇಕು ಎಂದು ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಎಂದರು.
ಪ್ರಮುಖರಾದ ಚುಮ್ಮಿ ದೇವಯ್ಯ, ಮಡಿಕೇರಿ ನಗರದಲ್ಲಿ ಯಾವುದೇ ವಾಹನಗಳು 20 ಕಿ.ಮೀ. ವೇಗದಲ್ಲಿ ಸಂಚಾರ ಮಾಡಬೇಕು ಎಂದು ಹಲವರು ಸಲಹೆ ಮಾಡಿದರು. ಕನ್ನಂಡ ಕವಿತಾ ಅವರು ಮಾತನಾಡಿ ಹೊಸ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಪೌರಾಯುಕ್ತರಾದ ವಿಜಯ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಿದ್ದೇಗೌಡ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಧನಂಜಯ ಇತರರು ಇದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*