ನಾಪೋಕ್ಲು ಆ.23 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಡಿಕೇರಿ ತಾಲೂಕಿನಲ್ಲಿ ವಿವಿಧ ಪ್ರೌಢಶಾಲೆಗಳಲ್ಲಿ ಬೋಧಿಸುತ್ತಿರುವ ವಿಷಯವಾರು ಶಿಕ್ಷಕರ ತಾಲೂಕು ಮಟ್ಟದ ಕಾರ್ಯಾಗಾರವನ್ನು ವಿವಿಧ ಪ್ರೌಢಶಾಲೆಗಳಲ್ಲಿ ಆಯೋಜಿಸಲಾಗಿದ್ದು, ಇಂಗ್ಲೀಷ್ ವಿಷಯದ ತರಬೇತಿ ಕಾರ್ಯಾಗಾರವು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.
ಕಾರ್ಯಾಗಾರವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಪ್ರಾಂಶುಪಾಲ ಶಿವಣ್ಣ ಹಾಗೂ ಕಕ್ಕಬೆ ಪ್ರೌಢಶಾಲೆಯ ಶಿಕ್ಷಕ ಕುಟ್ಟಂಜೆಟಿರ ಶರತ್ ಹಾಗೂ ಶಿಕ್ಷಕ ವೃಂದ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿದರು.
ಈ ಸಂದರ್ಭ ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ವಿಷಯ ಬೋಧಿಸುತ್ತಿರುವ ವಿಷಯ ಶಿಕ್ಷಕರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಬಗ್ಗೆ ಹಾಗೂ ಕ್ಲಿಷ್ಟಕರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಭೆಯಲ್ಲಿ ಪಾಲ್ಗೊಂಡು ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು.
ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. ಹಿಂದಿ ವಿಷಯದ ಕುರಿತು ಹಾಕತ್ತೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ, ಗಣಿತ ವಿಷಯದ ಕುರಿತ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ವಿಜ್ಞಾನ ವಿಷಯದ ತರಬೇತಿ ಕಾರ್ಯಗಾರ ಮಡಿಕೇರಿಯ ಸಂತ ಮೈಕೆಲರ ಪ್ರೌಢಶಾಲೆಯಲ್ಲಿ ಹಾಗೂ ಕನ್ನಡ ವಿಷಯದ ಕುರಿತ ಆ.31 ರಂದು ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ತರಬೇತಿ ಕಾರ್ಯಗಾರ ನಡೆಯಲಿದೆ.
ವರದಿ : ದುಗ್ಗಳ ಸದಾನಂದ