ಮಡಿಕೇರಿ ಆ.23 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಮಡಿಕೇರಿ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡ್ಲಿಪೇಟೆ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತ ಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆರೋಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ|| ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮದಂತೆ ಶರಣ ಸಂಸ್ಕೃತಿಯ ಕುರಿತು ಉಪನ್ಯಾಸ ಕಾರ್ಯಕ್ರಮ ಆ.26 ರಂದು ನಡೆಯಲಿದೆ.
ಕೊಡ್ಲಿಪೇಟೆಯ ಹಲಸಿನಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎಚ್. ಎಸ್ ಚಂದ್ರಮೌಳಿ ಉದ್ಘಾಟಿಸಲಿದ್ದು, ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವಕಾಮತ್ ರವರು ವಹಿಸಲಿದ್ದಾರೆ. ಶರಣ ಸಂಸ್ಕೃತಿಯ ಕುರಿತು ಪತ್ರಕರ್ತ ಎಸ್. ಮಹೇಶ್ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಎಂ. ಆರ್.ನಿರಂಜನ್, ದತ್ತಿದಾನಿ ಮಹಾಶರಣ ಮಾಗನೂರು ಬಸಪ್ಪ ಟ್ರಸ್ಟ್ನ ಕಾರ್ಯದರ್ಶಿ ಶ್ರೀ ಸಂಗಮೇಶ್ವರ ಗೌಡ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ.ವಿಜೇತ್, ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಪಿ.ಶಾಂತಮಲ್ಲಪ್ಪ ಉಪಸ್ಥಿತರಿರುತ್ತಾರೆ.
ಕೊಡ್ಲಿಪೇಟೆ ಹೋಬಳಿಯಲ್ಲಿ ಕಳೆದ ಸಾಲಿನಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.