ಮಡಿಕೇರಿ ಆ.27: ಅರಣ್ಯ, ಪ್ರಕೃತಿ, ಪರಿಸರ ಉಳಿಯಬೇಕು. ಜೊತೆಗೆ ಜೀವನ, ಜೀವನೋಪಾಯವೂ ಇರಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜನಸ್ನೇಹಿಯಾಗಿ ಮತ್ತು ಜನ ಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಡಿಕೇರಿಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕಳೆದ 15 ದಿನಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಮೂರು ಅಮೂಲ್ಯ ಜೀವಗಳು ಹೋಗಿವೆ. ಇದು ಅತ್ಯಂತ ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ತಿಳಿಯಲು ಜಿಲ್ಲೆಗೆ ಬಂದಿರುವುದಾಗಿ ತಿಳಿಸಿದರು.
ಇಂದು ತಾವು ಹಿರಿಯ ಅಧಿಕಾರಿಗಳೊಂದಿಗೆ ಆನೆ ದಾಳಿಯಿಂದ ಸಾವುಗಳು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ, ಆನೆ ದಾಳಿಯಿಂದ ಮೃತಪಟ್ಟ ಇಬ್ಬರ ಮನೆಗೆ ತೆರಳಿ ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿರುವುದಾಗಿ ತಿಳಿಸಿದ ಅವರು, ನಾವು ಮೃತರ ಕುಟುಂಬಕ್ಕೆ ಪರಿಹಾರದ ಹಣ ಕೊಡಬಹುದು, ಆದರೆ ಅಮೂಲ್ಯ ಜೀವ ಮರಳಿ ತಂದುಕೊಡಲು ಸಾಧ್ಯವಿಲ್ಲ. ಹೀಗಾಗಿ ಆನೆಗಳು ನಾಡಿಗೆ ಬಂದ ಕೂಡಲೇ ಅವುಗಳನ್ನು ಕಾಡಿಗೆ ಮರಳಿಸಲು ಮತ್ತು ತೋಟಗಳಲ್ಲೇ ಬೀಡು ಬಿಡುವ ಆನೆಗಳನ್ನು ಹಿಡಿದು ಕಾಡಿಗೆ ಕಳುಹಿಸಲು ಕ್ರಮ ಜರುಗಿಸಬೇಕು. ಆನೆಗಳನ್ನು ಹಿಡಿಯಲು ಅನುಮತಿಗೆ ಕಾಯುತ್ತಾ ಸಮಯ ವ್ಯರ್ಥ ಮಾಡದಂತೆ ಸೂಚಿಸಿದ ಸಚಿವರು ಜನರ ಮೇಲೆ ದಾಳಿ ಮಾಡುವ ಆನೆಗಳನ್ನು ಗುರುತಿಸಿ ತಕ್ಷಣ ಕಾರ್ಯೋನ್ಮುಖವಾಗುವಂತೆ ಸೂಚಿಸಿದರು.
ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿರುವ ಆನೆಗಳ ಬಗ್ಗೆ ದಿನದ 24 ಗಂಟೆಯೂ ನಿಗಾ ಇಡಬೇಕು. ಆನೆ ಹಿಡಿದ ತರುವಾಯ ಅವುಗಳಿಗೆ ರೇಡಿಯೋ ಕಾಲರ್ ಹಾಕಬೇಕು ಇದರಿಂದ ಪ್ರಾಣ ಹಾನಿ ಮತ್ತು ಬೆಳೆ ಹಾನಿ ತಡೆಯಬಹುದು ಎಂದರು.
ಅರಣ್ಯದೊಳಗೆ ನೀಲಗಿರಿ, ತೇಗದ ಮರ ಹೆಚ್ಚಾಗಿವೆ. ಆನೆಗಳಿಗೆ ಸೊಪ್ಪು ಆಹಾರ ಸಿಗುತ್ತಿಲ್ಲ. ಹೀಗಾಗಿ ಅವು ಕಾಡಿನಿಂದ ನಾಡಿಗೆ ಬರುತ್ತಿವೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಹೀಗಾಗಿ ಅರಣ್ಯದೊಳಗೆ ಆನೆಗಳಿಗೆ ಆಹಾರ ಸಿಗುವಂತಹ ಗಿಡ ನೆಡುವ ಬಗ್ಗೆ ಚಿಂತಿಸಿ ಎಂದು ನಿರ್ದೇಶನ ನೀಡಿದರು.
ಸೋಲಾರ್ ತಂತಿ ಬೇಲಿ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸಿದ ಸಚಿವರು, ಸೌರ ತಂತಿಬೇಲಿಗಳ ನಿರ್ವಹಣೆಯ ಹೇಗಿದೆ. ಅಳವಡಿಸಿರುವ ಎಷ್ಟು ಸೌರ ತಂತಿ ಬೇಲಿ ಕಾರ್ಯ ನಿರ್ವಹಿಸುತ್ತಿದೆ. ಎಷ್ಟು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ನಿಖರ ಮಾಹಿತಿ ಇಡಬೇಕು. ಸೌರ ತಂತಿ ಬೇಲಿ ಸೂಕ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ನಿರ್ವಹಣೆ ಸಮರ್ಪಕವಾಗಿ ಮಾಡಿ. ವಾರ್ಷಿಕ ನಿರ್ವಹಣೆಯ ಪರಿಶೀಲನೆ ಮಾಡಿ ಎಂದು ಸೂಚನೆ ನೀಡಿದರು.
ಸೂಕ್ತವಾಗಿ ಸೌರ ತಂತಿ ಬೇಲಿ ನಿರ್ವಹಣೆ ಮಾಡದಿದ್ದರೆ, ಸರ್ಕಾರ ಮಾಡಿದ ವೆಚ್ಚವೆಲ್ಲ ವ್ಯರ್ಥವಾಗುತ್ತದೆ. ಆನೆಗಳ ಸಮಸ್ಯೆಯೂ ಪರಿಹಾರ ಆಗುವುದಿಲ್ಲ. ಹೀಗಾಗಿ ಸಂಬಂಧಿತ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆನೆಗಳ ಹಾವಳಿ ತಡೆಯಲು ಶಾಶ್ವತವಾದ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿದ್ಧಪಡಿಸಿ ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಕೊಡಗು ಜಿಲ್ಲೆಯಲ್ಲಿ ಎಲ್ಲೆಲ್ಲಿ ರೈಲ್ವೆ ಬ್ಯಾರಿಕೇಡ್ ಅಗತ್ಯ ಇದೆ ಗುರುತಿಸಿ, ಜಿಲ್ಲೆಯಲ್ಲಿ ಎಷ್ಟು ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಹಾಕಬೇಕು ಎಂಬ ಬಗ್ಗೆ ತತ್ ಕ್ಷಣವೇ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಡಾ.ಮಂತರ್ ಗೌಡ, ಎ.ಎಸ್. ಪೊನ್ನಣ್ಣ, ಅಪರ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.