ಮಡಿಕೇರಿ ಆ.29 : ರೋಟರಿ ಮಡಿಕೇರಿ ವುಡ್ಸ್ ನಿಂದ, ಮಾದಾಪುರದ ಶ್ರೀಮತಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ರಕ್ತದಾನ ಬೖಹತ್ ಶಿಬಿರ ಮತ್ತು ಶಾಲಾ ಮಕ್ಕಳಿಗಾಗಿ ರಕ್ತದ ಗುಂಪನ್ನು ಗುರುತಿಸುವ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಶಿಬಿ ಹರದೂರು ಗ್ರಾಮಪಂಚಾಯತ್ ಅಧ್ಯಕ್ಷೆ ಉಷಾ ಶಿಬಿರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಯುವಜನತೆ ಮುಂದೆ ಬಂದು ರಕ್ತದಾನ ಮಾಡುವುದರ ಮೂಲಕ ಮತ್ತೊಂದು ಜೀವಕ್ಕೆ ಸಹಾಯ ಸೇತುವಾಗಬೇಕು ಎಂದು ಕೋರಿದರು.
ಕೊಡಗು ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ರಕ್ತದಾನವಾಗಿದ್ದು, ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡುವುದರೊಂದಿಗೆ ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ರಕ್ತದಾನ ಮತ್ತು ಅದರ ಅವಶ್ಯಕತೆಗಳ ಬಗ್ಗೆ ಮಾತನಾಡಿದ ಮಡಿಕೇರಿ ರಕ್ತನಿಧಿಯ ಅಧಿಕಾರಿ ಡಾ.ಕರುಂಬಯ್ಯ ಸಮಾಜದಲ್ಲಿ ರಕ್ತದಾನದ ಬಗೆಗಿನ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವೂ ಬಹಳ ಮುಖ್ಯ, ಆರೋಗ್ಯವಂತ ಮಹಿಳೆಯಾಗಿದ್ದರೆ ಪ್ರತೀ ನಾಲ್ಕು ತಿಂಗಳಿಗೊಮ್ಮೆ, ಗಂಡಸರು ಪ್ರತೀ ಮೂರು ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡಬಹುದು. ಎಂದು ಮಾಹಿತಿ ನೀಡಿದರಲ್ಲದೇ ರೋಟರಿ ಮಡಿಕೇರಿ ವುಡ್ಸ್ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಮಾತನಾಡಿ, ರಕ್ತದಾನದಂತಹ ಸತ್ಕಾರ್ಯವನ್ನು ಆಯೋಜಿಸುವ ಮೂಲಕ ರೋಟರಿ ವುಡ್ಸ್ ಸದಾಕಾಲ ಸೇವೆಯನ್ನು ಮಾಡುವ ಬದ್ಧತೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅಲ್ಲಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುವ ಯೋಜನೆಯನ್ನು ಹಾಕಿಕೊಂಡಿದೆ ಎಂದರು.
ಶ್ರೀಮತಿ ಡಿ.ಚೆನ್ನಮ್ಮ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸಿ. ಜಿ. ಮಂದಣ್ಣ,ಮಾದಾಪುರ ಸರಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಿಶಾ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಭೋಜಮ್ಮ,ಶ್ರೀವಿನಾಯಕ ಸೇವಾ ಸಮಿತಿ ಅಧ್ಯಕ್ಷ ಚಂದನ್, ಗ್ರಾಮಪಂಚಾಯತ್ ಸದಸ್ಯ ರಮೇಶ್,ರೋಟರಿ ವುಡ್ಸ್ ಸದಸ್ಯರಾದ ಪ್ರವೀಣ್, ಕಶ್ಯಪ್ ಮತ್ತು ರೆಡ್ ಕ್ರಾಸ್ ನ ಸದಸ್ಯ ಉತ್ತಯ್ಯ ಉಪಸ್ಥಿತರಿದ್ದರು. ಯೂತ್ ರೆಡ್ ಕ್ರಾಸ್ ನಿದೇ೯ಶಕ ಎಂ. ಧನಂಜಯ ವಂದಿಸಿದ ಕಾಯ೯ಕ್ರಮದಲ್ಲಿ ಕಾಲೇಜು ವಿದ್ಯಾಥಿ೯ಗಳು ಪ್ರಾಥಿ೯ಸಿದರು.
ಶಿಬಿರದಲ್ಲಿ 45 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. 220 ವಿದ್ಯಾಥಿ೯ಗಳ ರಕ್ತದ ಗುಂಪನ್ನು ಗುರುತಿಸಲಾಯಿತು. ರೆಡ್ ಕ್ರಾಸ್ ಜಿಲ್ಲಾ ಘಟಕ, ಚೆನ್ನಮ್ಮಪ್ರೌಢಶಾಲೆ,ವಿನಾಯಕ ಸೇವಾಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾದಾಪುರ ಮತ್ತು ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.