ಮಡಿಕೇರಿ ಆ.29 : ಬಡವರ, ಶೋಷಿತರ ಪರವಾದ ಕಾಂಗ್ರೆಸ್ ಸರಕಾರ 100 ದಿನಗಳನ್ನು ಪೂರೈಸುತ್ತಿದ್ದು, ಈ ಅವಧಿಯಲ್ಲಿ ನುಡಿದಂತೆ ನಡೆದಿದೆಯೆಂದು ಶಾಸಕ ಎ.ಎಸ್.ಪೊನ್ನಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ತಿತಿಮತಿಯ ಲ್ಯಾಂಪ್ ಸೊಸೈಟಿ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ, ಸಂಸ್ಥೆ ನಿಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರು ಅನುಷ್ಠಾನಕ್ಕೆ ತಂದ ಪಂಚಾಯತ್ ರಾಜ್ ಕಾನೂನುಗಳಿಂದ ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ, ಪಂಗಡ ಸಮುದಾಯಕ್ಕೆ ಸಹಕಾರಿ ಸಂಘಗಳಲ್ಲಿ ಬಹಳಷ್ಟು ಪ್ರೋತ್ಸಾಹ ನೀಡುವಂತಹ ಹಲವಾರು ನೀತಿಗಳನ್ನು ರೂಪಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಚುನಾವಣಾ ಪೂರ್ವ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದಾಗ, ವಿಪಕ್ಷಗಳು ಲೇವಡಿ ಮಾಡಿದ್ದವು.ಗ್ಯಾರಂಟಿ ಯೋಜನೆಗಳು ಜಾರಿಯಾದಲ್ಲಿ ರಾಜ್ಯ ದಿವಾಳಿಯಾಗುತ್ತದೆ ಎಂದು ಬಡವರ, ಶೋಷಿತರ, ಅವಕಾಶ ವಂಚಿತರ ವಿರೋಧಿಗಳು ಹಂಗಿಸಿದ್ದರು. ಆದರೆ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರಕಾರ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ ಎಂದು ಹೇಳಿದರು.
ಮಹಿಳೆಯರಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ ಕಲ್ಪಸಿದ ‘ಶಕ್ತಿ’ ಯೋಜನೆ, 200 ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆ, ಬಿಪಿಎಲ್ ಕಾರ್ಡ್ ಹೊಂದಿರುವ ಬಡಕುಟುಂಬದ ಪ್ರತಿ ಸದಸ್ಯನಿಗೆ 10 ಕೆ.ಜಿ. ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆ ಈಗಾಗಲೇ ಜಾರಿಯಾಗಿದೆ. ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಚಾಲನೆ ದೊರೆಯಲಿದೆ. ಇಂತಹ ಜನಪರವಾದ ಐತಿಹಾಸಿಕ ಕಾರ್ಯಕ್ರಮಗಳನ್ನು ಇದುವರೆಗಿನ ಯಾವುದೇ ಸರಕಾರ ಜಾರಿಗೆ ತಂದಿಲ್ಲ ಎಂದರು.
ನಾನು ರಾಜಕೀಯ ಕ್ಷೇತ್ರದಲ್ಲಿ ಇರುವವರೆಗೂ ನಿಮ್ಮವನಾಗೇ ಇರುತ್ತೇನೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದರು.