ಮಡಿಕೇರಿ ಸೆ.2 : ವಿದ್ಯಾಭಾರತಿ ಬಡಾವಣೆಯ ಸ್ಫೂರ್ತಿ ಯುವಕ ಸಂಘದ ವತಿಯಿಂದ ಹದಿಮೂರನೇ ವರ್ಷದ ಗೌರಿ ಗಣೇಶೋತ್ಸವದ ನೂತನ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಸುರೇಂದ್ರ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿ ಗಮನಾರ್ಹ ಸೇವೆಸಲ್ಲಿಸಿದ್ದ ರವಿಚಂದ್ರ ಅವರ ಮಾರ್ಗದರ್ಶನದಲ್ಲಿ ಗಣಪತಿ ಉತ್ಸವ ಸಮಿತಿಯ ವತಿಯಿಂದ ಕೆ.ನಿಡುಗಡೆ ಗ್ರಾ.ಪಂ ವ್ಯಾಪ್ತಿಯಲ್ಲಿ ಶ್ರಮದಾನ ನಡೆಯಿತು.
ಗ್ರಾಮದ ಮೂರನೇ ಮೈಲಿನಲ್ಲಿರುವ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಮೊಣಕಾಲ್ಮುರಿ ಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ನಂತರ ವಿದ್ಯಾ ಭಾರತಿ ಬಡಾವಣೆಯ ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಿ ಸುಣ್ಣ ಬಣ್ಣ ಹೊಡೆದು, ಊರಿನ ನೀರಿನ ಟ್ಯಾಂಕ್ ಶುಚಿಗೊಳಿಸಿ ಆಕರ್ಷಕ ಬಣ್ಣ ಬಳಿಯುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಸಂಘದ ಉಪಾಧ್ಯಕ್ಷ ಸುನಿಲ್, ಕಾರ್ಯದರ್ಶಿ ಗಿರೀಶ್, ಖಜಾಂಜಿ ರಜಿತ್, ಪತ್ರಕರ್ತ ರಂಜಿತ್ ಕವಲಪಾರ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.