ಮಡಿಕೇರಿ ಸೆ.2 : ಹಳ್ಳಿ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ನಕ್ಷತ್ರಗಳನ್ನಾಗಿಸಿದ ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉತ್ಸಾಹಿ ದೈಹಿಕ ಶಿಕ್ಷಕ ಬಿ.ಟಿ.ಪೂರ್ಣೇಶ್ ಅವರಿಗೆ ಈ ಬಾರಿಯ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಸುಮಾರು 29 ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಹಲವು ಹಾಕಿ ಕ್ರೀಡಾಪಟುಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಾಕಿ ಶಿಬಿರಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ಇವರದ್ದು. ಹಾಕಿ ಕ್ರೀಡೆಯನ್ನು ತಮ್ಮ ಜೀವನಾಡಿಯನ್ನಾಗಿಸಿಕೊಂಡು ಉಚಿತ ತರಬೇತಿ ಶಿಬಿರಗಳನ್ನು ನಡೆಸಿ ಗ್ರಾಮೀಣ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಾರೆ.
ಪ್ರಸ್ತುತ 36ನೇ ರಾಷ್ಟ್ರೀಯ ಕ್ರೀಡೆಯಲ್ಲಿ ಪೂರ್ಣೇಶ್ ಅವರ ಇಬ್ಬರು ವಿದ್ಯಾರ್ಥಿಗಳಾದ ಅಪ್ಸರ ಹಾಗೂ ಅರ್ಪಿತ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಈಗಾಗಲೇ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವ ಪೂರ್ಣೇಶ್ ಅವರು ಕ್ರೀಡಾಸಕ್ತರನ್ನು ಬೆಳೆಸಿದ್ದಾರೆ. ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಬಡ ವಿದ್ಯಾರ್ಥಿಗಳಿಗಾಗಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ. ಇವರ ಪ್ರಯತ್ನದ ಫಲವಾಗಿ ಹಲವು ಹಳ್ಳಿ ಪ್ರತಿಭೆಗಳು ಕ್ರೀಡಾ ಕ್ಷೇತ್ರ, ಸೇನಾ ಕ್ಷೇತ್ರ ಮತ್ತು ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.
ರಾಜ್ಯ ಪ್ರಶಸ್ತಿ ಲಭಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪೂರ್ಣೇಶ್, ಈ ಪ್ರಶಸ್ತಿ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಗೆ ಅರ್ಪಣೆ ಎಂದು ತಿಳಿಸಿದ್ದಾರೆ.
ನನ್ನ ನಿವೃತ್ತಿಗೆ ಇನ್ನು ಕೇವಲ 3 ವರ್ಷ ಬಾಕಿ ಉಳಿದಿದೆ, ನಿವೃತ್ತಿಯಾದ ನಂತರವೂ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ನಕ್ಷತ್ರಗಳನ್ನಾಗಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ.












