ಮಡಿಕೇರಿ ಸೆ.4 : ಇಬ್ಬರ ಮೇಲೆ ದಾಳಿ ಮಾಡಿದ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯೇ ಬಲಿಯಾದ ಘಟನೆ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ನಡೆದಿದೆ.
ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯ ಸಿಬ್ಬಂದಿ ಗಿರೀಶ್ (35) ಮೃತ ದುರ್ದೈವಿ. ಸುಂಟಿಕೊಪ್ಪ ಕೆದಕಲ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಓಡಿಸಲು 20 ಮಂದಿಯ ಆರ್.ಆರ್.ಟಿ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಈ ಸಂದರ್ಭ ಸಿಬ್ಬಂದಿಗಳನ್ನೇ ಅಟ್ಟಾಡಿಸಿಕೊಂಡು ಬಂದ ಕಾಡಾನೆ ಏಕಾಏಕಿ ಗಿರೀಶ್ ಅವರ ಮೇಲೆ ದಾಳಿ ಮಾಡಿ ತುಳಿದು ಹಾಕಿದೆ.
ಘಟನೆಯಿಂದ ತೀವ್ರವಾಗಿ ಗಾಯಗೊಂಡ ಗಿರೀಶ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
::: ಇಬ್ಬರ ಮೇಲೆ ದಾಳಿ :::
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಿ ಬ್ಲಾಕ್ ಬಳಿ ಬೈಕ್ ನಲ್ಲಿ ಮರದ ಕೆಲಸಕ್ಕೆಂದು ತೆರಳುತ್ತಿದ್ದ ಸುಂಟಿಕೊಪ್ಪದ ನಿವಾಸಿ ಮುರುಗೇಶ್ ಎಂಬುವವರ ಮೇಲೆ ಒಂಟಿಸಲಗ ಮೊದಲು ದಾಳಿ ಮಾಡಿತು. ಗಾಯಗೊಂಡ ಮುರುಗೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನೆಯಿಂದ ಬೈಕ್ ಗೆ ಹಾನಿಯಾಗಿದೆ.
ಅಲ್ಲಿಂದ ಕಾಲ್ಕಿತ್ತ ಕಾಡಾನೆ ಸ್ವಲ್ಪ ದೂರದಲ್ಲೇ ಇದ್ದ ಹಬೀಬ್ ತೋಟದತ್ತ ತೆರಳಿ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ಮಾಡಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಕಾಡಾನೆ ಏಕಾಏಕಿ ಅರಣ್ಯ ಸಿಬ್ಬಂದಿ ಗಿರೀಶ್ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ.
ಸಂತಾಪ: ಮಾಹಿತಿ ತಿಳಿದು ಜಿಲ್ಲಾಸ್ಪತ್ರೆಗೆ ಆಗಮಿಸಿದ ಡಿಎಫ್ಓ ಎ.ಟಿ.ಪೂವಯ್ಯ , ಎಸಿಎಫ್ ನೆಹರು ಮತ್ತು ಇತರ ಅಧಿಕಾರಿ ವೃಂದ ಮತ್ತು ಸಿಬ್ಬಂದಿಗಳು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮೃತ ಗಿರೀಶ್ ಹಲವು ವರ್ಷಗಳಿಂದ ಕುಶಾಲನಗರ ಆರ್.ಆರ್.ಟಿ ತಂಡದ ಸದಸ್ಯನಾಗಿದ್ದು, ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಗಿರೀಶ್ಗೆ ಸಂತಾಪ ಸೂಚಿಸಿದರು.