ಮಡಿಕೇರಿ ಅ.14 NEWS DESK : ದಶಕಗಳಿಂದ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದ್ದ ಚೆಂಬು ಗ್ರಾಮದ ದಬ್ಬಡ್ಕ ಪ್ರದೇಶದ ಮನೆಗಳಿಗೆ ತಾತ್ಕಾಲಿಕ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ವಿಶೇಷ ಕಾಳಜಿ ಮತ್ತು ಸೂಚನೆಯ ಮೇರೆಗೆ, ಅರಣ್ಯ ಇಲಾಖೆಯ ಮೂಲಕ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಪ್ರದೇಶದಲ್ಲಿ ಸುಮಾರು 29 ಕುಟುಂಬಗಳು ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದ್ದು, ತಾತ್ಕಾಲಿಕ ಸೌರ ವಿದ್ಯುತ್ ಸಂಪರ್ಕಕ್ಕಾಗಿ ಬೇಡಿಕೆ ಸಲ್ಲಿಸಿರುವ ಸುಮಾರು 22 ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಮೊದಲ ಹಂತವಾಗಿ ಕಮಲ ಬದಿಕೋಡಿ ಅವರ ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು. ಉಳಿದ ಅರ್ಹ ಫಲಾನುಭವಿಗಳ ಮನೆಗಳಿಗೂ ಹಂತ ಹಂತವಾಗಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಲಾಗುವುದು. ಶಾಸಕ ಪೊನ್ನಣ್ಣ ಹಾಗೂ ಧರ್ಮಜ ಉತ್ತಪ್ಪ ಅವರ ಸೂಚನೆಯಂತೆ, ಅವರ ಅನುಪಸ್ಥಿತಿಯಲ್ಲಿ ಕೊಲ್ಯದ ಗಿರೀಶ್, ಸಂಪಾಜೆ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ರವಿರಾಜ್ ಹೊಸೂರು, ಸೂರಜ್ ಹೊಸೂರು ಮತ್ತು ಸ್ಥಳೀಯರು ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. :: ಸೌಲಭ್ಯದ ಸದ್ಬಳಕೆಗೆ ಮನವಿ :: ಈ ಸಂದರ್ಭದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಶಾಸಕರು ಈ ಹಿಂದೆ ನೀಡಿದ್ದ ಸೂಚನೆಯಂತೆ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ. ಸರ್ಕಾರದ ವತಿಯಿಂದ ದೊರೆಯುತ್ತಿರುವ ಈ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕೊಲ್ಯದ ಗಿರೀಶ್ ಮಾತನಾಡಿ, ಶಾಸಕರ ಸೂಚನೆಯ ಮೇರೆಗೆ ಅವರ ಪರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಶಾಸಕರು ವಿಶೇಷ ಕಾಳಜಿ ವಹಿಸಿ ಕಲ್ಪಿಸಿರುವ ಈ ಸೌಲಭ್ಯವು ಅರ್ಹ ಪ್ರತಿಯೊಂದು ಕುಟುಂಬಕ್ಕೂ ತಲುಪುವಂತಾಗಲಿ ಎಂದು ಆಶಿಸಿದರು. ಸೂರಜ್ ಹೊಸೂರು ಮಾತನಾಡಿ, ದಶಕಗಳಿಂದ ಬೆಳಕಿಲ್ಲದೆ ಬದುಕುತ್ತಿದ್ದ ಕುಟುಂಬಗಳ ಮನೆಗಳಿಗೆ ಬೆಳಕು ಕಲ್ಪಿಸಲು ವಿಶೇಷ ಪ್ರಯತ್ನ ನಡೆಸಿದ ಶಾಸಕ ಪೊನ್ನಣ್ಣ ಹಾಗೂ ಸದಾ ಬೆಂಬಲವಾಗಿ ನಿಂತಿರುವ ಧರ್ಮಜ ಉತ್ತಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಸೋಮಣ್ಣ ಬಾಲಂಬಿ, ಬಂಗಾರಕೋಡಿ ವೆಂಕಟರಮಣ, ರಘುನಾಥ್ ಬಾಲಂಬಿ, ಮಾಣಿಕಲ್ಲು ವಿನಯ, ಹರ್ಷಿತ್ ಚೆಂಡೆಡ್ಕ, ಉದಯ ಹೊದ್ದಟ್ಟಿ, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ಹೊಸೂರು ಗಿರೀಶ್, ಕೆದಂಬಾಡಿ ಗಿರೀಶ್, ಬಂಗಾರಕೋಡಿ ವಿಕಿ ಸೇರಿದಂತೆ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಹೊಸೂರು ಗಿರೀಶ್ ವಂದಿಸಿದರು.


















