ಮಡಿಕೇರಿ ಸೆ.4 : ಸಮಾಜದ ಒಳಿತಿಗಾಗಿ ಪತ್ರಿಕಾ ಕ್ಷೇತ್ರದಲ್ಲಿ ಜೋಡೆತ್ತಿನಂತೆ ಕಾರ್ಯನಿರ್ವಹಿಸುವ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಸಂಕಷ್ಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಒತ್ತಾಯಿಸಿದರು.
ಕೊಡಗು ಪತ್ರಕರ್ತರ ಸಂಘ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ `ಪತ್ರಿಕಾ ವಿತರಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಮತ್ತು ಪತ್ರಿಕಾ ವಿತರಕ ಸಮುದಾಯಕ್ಕೆ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ದೊರಕಬೇಕಾದ ಅಗತ್ಯ ಸೌಲಭ್ಯಗಳು ದೊರಕಿಲ್ಲ. ರಾಜ್ಯ ವ್ಯಾಪಿ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿದ್ದಾರೆ. ವಿಪರ್ಯಾಸವೆಂದರೆ ಸರ್ಕಾರದ ಮಾನ್ಯತೆ ಪಡೆದ ಪತ್ರಕರ್ತರ ಸಂಖ್ಯೆ ಕೇವಲ 1500 ಎಂದು ವಿಷಾದಿಸಿದರು.ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ದುಡಿಯುವವರು ಪತ್ರಕರ್ತರಲ್ಲವೇ ಎಂದು ಅವರು ಪ್ರಶ್ನಿಸಿದರು.ಕಳೆದ 2018 ರಲ್ಲಿ ಸಿದ್ದರಾಮಯ್ಯ ಅವರು ಅಂದಿನ ಆಡಳಿತಾವಧಿಯ ಕೊನೆಯ ಬಜೆಟ್‍ನಲ್ಲಿ 2 ಕೋಟಿ ರೂ.ಗಳ ಪತ್ರಿಕಾ ವಿತರಕರ ಕ್ಷೇಮನಿಧಿಯನ್ನು ಘೋಷಿಸಿದ್ದರು. ಆದರೆ, ನಂತರದ ಅವಧಿಯಲ್ಲಿ ಅದು ಅನುಷ್ಠಾನಕ್ಕೆ ಬರಲಿಲ್ಲ.ಇಂದಿನ ಸರ್ಕಾರ ವಿವಿಧ ಜನಪರ ಯೋಜನೆಯ ಮೂಲಕ ಕೋಟ್ಯಂತರ ಹಣವನ್ನು ಶ್ರೀ ಸಾಮಾನ್ಯರಿಗೆ ನೀಡುತ್ತಿರುವುದು ಸ್ವಾಗತಾರ್ಹ. ಈ ಅವಧಿಯಲ್ಲಾದರು ಕ್ಷೇಮನಿಧಿಗೆ ಸೂಚಿತ ಮೊತ್ತವನ್ನು ಒದಗಿಸಬೇಕೆಂದು ಮನವಿ ಮಾಡಿದರು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಪತ್ರಕರ್ತರ ಮತ್ತು ವಿತರಕರ ಮೂಲಭೂತ ಸೌಲಭ್ಯಗಳ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ನಂಬರ್‌ನಲ್ಲಿ ನಮಗೆ ದೊರಕಬೇಕಾದ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಕದ ತಟ್ಟಲಿದ್ದೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಸಭೆಯ ಮಾಜಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಮಾತನಾಡಿ, ಬಜೆಟ್‍ನಲ್ಲಿ ಕಲ್ಯಾಣನಿಧಿಯನ್ನು ಘೋಷಿಸಿದ್ದಲ್ಲಿ ಅದು ಕಾರ್ಯಗತಗೊಳ್ಳಲೇ ಬೇಕು. ಅದಕ್ಕಾಗಿ ಹಣ ಮೀಸಲಾಗಿರುತ್ತದೆ. ಆದರೆ, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ತಾನು ಮತ್ತು ತನ್ನ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ, ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆಯಿತ್ತರು.
ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಪತ್ರಕರ್ತರು ಮತ್ತು ವಿತರಕರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸುವಂತೆ ಮನವಿ ಇತ್ತು. ಆದರೆ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಗತ್ಯ ಜಾಗ ಇರಲಿಲ್ಲ. ಇನ್ನು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇರುವ ಜಾಗಗಳೆಲ್ಲವು ಅರಣ್ಯ ಎಂದು ನಮೂದಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವವರ ಉತ್ತಮ ಬದುಕಿಗಾಗಿ ಸರ್ಕಾರದ ಮಟ್ಟದಲ್ಲಿ ತಮ್ಮಿಂದ ಸಾಧ್ಯವಾಗುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಮಾತನಾಡಿ, ಪತ್ರಿಕೆಗಳನ್ನು ಓದುಗನಿಗೆ ತಲುಪಿಸುವಲ್ಲಿ ಮುಖ್ಯ ಪಾತ್ರ ವಹಿಸುವ `ವಿತರಕ’ ಹುದ್ದೆ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಹೊಂದಿದ ಗೌರವಯುತ ವೃತ್ತಿಯಾಗಿದೆ. ಪತ್ರಿಕೆ ಮತ್ತು ಓದುಗರ ನಡುವಿನ ಕೊಂಡಿಯೇ `ವಿತರಕ’ ಎಂದು ಬಣ್ಣಿಸಿದ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಕ್ಷಣ ಕ್ಷಣಕ್ಕು ವಿವಿಧ ವಿದ್ಯಮಾನಗಳ ಮಾಹಿತಿ ಬರುತ್ತಿರುತ್ತದೆ. ಇವುಗಳ ನಡುವೆ, ಯಾವುದೇ ಸುದ್ದಿಯ ವಿವರವಾದ ಮಾಹಿತಿ ಮತ್ತು ವಿಶ್ಲೇಷಣೆಗಳನ್ನು ಪತ್ರಿಕೆಗಳ ಮೂಲಕ ಅರಿತುಕೊಳ್ಳಲು ಜನ ಆಸಕ್ತರಾಗಿರುತ್ತಾರೆ ಎಂದು ತಿಳಿಸಿದರು.
ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಮತ್ತು ಅವರ ಕುಟುಂಬಸ್ಥರು ವರ್ಷಕ್ಕೆ ಒಮ್ಮೆ ಪತ್ರಿಕಾ ವಿತರಕ ದಿನಾಚರಣೆಯಂದು ಒಗ್ಗೂಡುವ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿ.ರಾಜೇಂದ್ರ ಇದೇ ಸಂದರ್ಭ ಸಲಹೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಪತ್ರಕರ್ತರು ಮತ್ತು ವಿತರಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯಕ್ರಮಗಳನ್ನು ಸಂಘದ ಮುಖೇನ ಹಮ್ಮಿಕೊಳ್ಳ್ಳಲಾಗುತ್ತದೆ. ಸಂಘದ ವತಿಯಿಂದ ಜಿಲ್ಲೆಯಲ್ಲೆ ಮೊಟ್ಟಮೊದಲ ಬಾರಿಗೆ ಕಳೆದ ಸಾಲಿನಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ಹಮ್ಮಿಕೊಂಡು ಬಂದಿರುವುದಾಗಿ ತಿಳಿಸಿದರು.
ಪತ್ರಿಕಾ ವಿತರಕರ ಪರವಾಗಿ ಚಿ.ನಾ.ಸೋಮೇಶ್ ಮಾತನಾಡಿ, ಕೊಡಗಿನಂತಹ ಗುಡ್ಡ ಗಾಡು ಪ್ರದೇಶದಲ್ಲಿ ಪತ್ರಿಕಾ ವಿತರಣೆ ಎನ್ನುವುದು ಅತೀ ದೊಡ್ಡ ಸವಾಲಿನ ಕೆಲಸವಾಗಿದ್ದು, ಇಲ್ಲಿನ ವಿತರಕರು ಅಷ್ಟೇ ಜವಾಬ್ದಾರಿಯಿಂದ ಆ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಅವರ ಬದುಕನ್ನು ಹಸನು ಗೊಳಿಸುವ ನಿಟ್ಟಿನ ಕ್ಷೇಮನಿಧಿ ಜಾರಿಗೆ ಬರುವುದು ಅವಶ್ಯವೆಂದು ತಿಳಿಸಿದರು.
:: ಸನ್ಮಾನ :: ಜಿಲ್ಲೆಯಲ್ಲಿ ಪತ್ರಿಕಾ ವಿತರಕರ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿರುವ ಶಕ್ತಿ ಪತ್ರಿಕೆಯ ಪ್ರಸರಣಾ ವ್ಯವಸ್ಥಾಪಕ ಕೆ.ಜೆ.ಸುಬ್ಬಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಜಿಲ್ಲೆಯ ವಿವಿಧೆಡೆಗಳ 70 ಕ್ಕೂ ಹೆಚ್ಚು ಪತ್ರಿಕಾ ವಿತರಕರು ಮತ್ತು ಏಜೆಂಟರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಬಿವೃದ್ಧಿ ಸಂಘದ ನಿರ್ದೇಶಕರಾದ ಟಿ.ಜಿ.ಸತೀಶ್ ಉಪಸ್ಥಿತರಿದ್ದರು. ಕೊಡಗು ಪತ್ರಕರ್ತರ ಸಂಘದ ಸದಸ್ಯ ಪ್ರವೀಣ್ ಪಾರ್ಥಿಸಿ, ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಖಜಾಂಚಿ ಕೆ.ತಿಮ್ಮಪ್ಪ ಮತ್ತು ಸದಸ್ಯ ಪಿ.ಎಂ.ರವಿ ಕಾರ್ಯಕ್ರಮ ನಿರೂಪಿಸಿದರು.
ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ವಂದಿಸಿದರು.









