ಸುಂಟಿಕೊಪ್ಪ ಸೆ.4 : ಕಾಡಾನೆಯ ದಾಳಿಯಿಂದ ಎರಡು ಜೀವಗಳು ಪಾರಾದ ಬೆನ್ನಲ್ಲೇ ಗ್ರಾಮಸ್ಥರ ಪ್ರಾಣ ಉಳಿಸಲು ಬಂದ ಅರಣ್ಯ ಸಿಬ್ಬಂದಿಯ ಪ್ರಾಣ ಪಕ್ಷಿಯೇ ಹಾರಿ ಹೋಗಿರುವುದು ವಿಪರ್ಯಾಸ. ವನ್ಯಜೀವಿ ಹಾಗೂ ಮಾನವನ ನಡುವಿನ ಸಂಘರ್ಷವನ್ನು ಹತ್ತಿಕ್ಕುವ ಯುದ್ಧದಲ್ಲಿ ಸದಾ ಸೋಲುತ್ತಿರುವ ಆಡಳಿತ ವ್ಯವಸ್ಥೆ ತಲೆ ತಗ್ಗಿಸಿ ಸೋಲು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದು.
ಸುಂಟಿಕೊಪ್ಪ ಹೋಬಳಿಯ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ಬ್ಲಾಕ್ ಬಳಿಯಲ್ಲಿ ಒಂಟಿ ಸಲಗ ಇಂದು 2 ಬೈಕ್ಗಳ ಮೇಲೆ ದಾಳಿ ಮಾಡಿತು. ಬೈಕ್ ಸವಾರರಾದ ಸುಂಟಿಕೊಪ್ಪದ ನಿವಾಸಿ ಮುರುಗೇಶ್ ಹಾಗೂ ಜಗದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು.
ಇವರ ಚೀರಾಟ ಮತ್ತು ಜನರು ದೊಡ್ಡ ಮಟ್ಟದಲ್ಲಿ ಕೂಗು ಎಬ್ಬಿಸಿದ್ದರಿಂದ ಅಲ್ಲಿಂದ ಪಲಾಯನ ಮಾಡಿದ ಕಾಡಾನೆ ಕಾಡಿನೊಳಗೆ ಓಡಿಹೋಗಿದೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಕಾಡಾನೆ ಓಡಿಸುವ ಆರ್ಆರ್ಟಿ ತಂಡದ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಗಿರೀಶ್(35) ಕಾಡಾನೆ ದಾಳಿಗೆ ಸಿಲುಕಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಕೊನೆಯುಸಿರೆಳೆದಿದ್ದಾರೆ.
ಕೆದಕಲ್ ವ್ಯಾಪ್ತಿಯ ಮಿಡ್ ಲ್ಯಾಂಡ್ ಎಸ್ಟೇಟ್, ಕೆದಕಲ್ ಎಸ್ಟೇಟ್, ವಿಂದ್ಯಾ ಎಸ್ಟೇಟ್, ತ್ರಿಪುರ ಎಸ್ಟೇಟ್, ದೇವಗಿರಿ ಎಸ್ಟೇಟ್, ಗ್ರೀನ್ ಧಾರೆ ಎಸ್ಟೇಟ್, ಸುನ್ನಿಗ್ ಧಾರೆ ಎಸ್ಟೇಟ್ ಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಆನೆಯು ಕೆದಕಲ್ ಎಸ್ಟೇಟ್ ಮತ್ತು ಮಿಡ್ ಲ್ಯಾಂಡ್ ಎಸ್ಟೇಟ್ ನಡುವೆ ಓಡಾಡುತ್ತಿದೆ ಎಂದು ತಿಳಿದು ಬಂದಿದೆ.
::: ಈ ಸಾವು ನ್ಯಾಯವೇ ?
ಸೋಮವಾರದ ಘಟನೆ ದುರಾದೃಷ್ಟಕರವಾಗಿದ್ದು, ಅರಣ್ಯ ಇಲಾಖೆಯ ಕಾಡಾನೆ ಓಡಿಸುವ ಕಾರ್ಯಾಚರಣೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಯಾವುದೇ ವೈಜ್ಞಾನಿಕ ಸ್ಪರ್ಷವಿಲ್ಲದೆ, ನವೀನ ತಂತ್ರಜ್ಞಾನದ ಬಳಕೆ ಇಲ್ಲದೆ, ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳದೆ ಕೇವಲ ಪಟಾಕಿ ಮತ್ತು ಬೆದರು ಗುಂಡಿನ ಕಾರ್ಯಾಚರಣೆ ಇನ್ನೆಷ್ಟು ದಿನ ಮುಂದುವರೆಯಬೇಕು, ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟಾಕಿ ಸಿಡಿಸಿ, ಬೆದರು ಗುಂಡು ಹಾರಿಸುವ ಪ್ರಯೋಗವನ್ನು ಕಳೆದ ಅನೇಕ ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ. ಈ ಪ್ರಯೋಗದಿಂದ ಕಾಡಾನೆಗಳು ತೋಟದಿಂದ ತೋಟಕ್ಕೆ ಓಡುತ್ತವೆಯೇ ಹೊರತು ಯಾವುದೇ ಪರಿಣಾಮ ಬೀರುತ್ತಿಲ್ಲ, ಬದಲಿಗೆ ಈ ರೀತಿಯ ಬೆದರಿಕೆಗಳಿಗೆ ಅಂಜದ ಕಾಡಾನೆಗಳು ಪ್ರತಿದಾಳಿ ಮಾಡುತ್ತಿವೆ.
ಕಾಡಾನೆಗಳು ಸಿಬ್ಬಂದಿಗಳ ಮೇಲೆ ದಿಢೀರ್ ದಾಳಿ ಮಾಡಿದಾಗ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಲಿ, ಕನಿಷ್ಠ ಕಾರ್ಯಾಚರಣೆ ನಡೆಸುವ ವ್ಯಾಪ್ತಿಯಲ್ಲೇ ವೈದ್ಯರ ಸಹಿತ ಆಂಬ್ಯುಲೆನ್ಸ್ ಆಗಲಿ ಇಲ್ಲ. ಕಾಡಾನೆಗಳ ಸಂಚಾರದ ಬಗ್ಗೆ ಮಾಹಿತಿ ಸಂಗ್ರಹವಿಲ್ಲ. ಹಲವು ವೈಫಲ್ಯಗಳ ಕಾರ್ಯಾಚರಣೆಯಿಂದ ಇಂದು ಅಮಾಯಕ ಸಿಬ್ಬಂದಿಗಳು ಪ್ರಾಣತ್ಯಾಗ ಮಾಡಬೇಕಾಗಿದೆ. ಇವರನ್ನೇ ನಂಬಿಕೊoಡಿರುವ ಕುಟುಂಬದ ಸದಸ್ಯರು ನಿತ್ಯ ಕಣ್ಣೀರು ಹಾಕುವ ಪರಿಸ್ಥಿತಿ ಉದ್ಭವಿಸಿದೆ.
ಒಬ್ಬ ವ್ಯಕ್ತಿಯ ಜೀವ ಹೋದರೆ 15 ಲಕ್ಷ ರೂ. ಪರಿಹಾರ ನೀಡುವುದು, ಸಮಾಧಾನಕ್ಕಾಗಿ ಪರಿಹಾರದ ಮೊತ್ತ ಹೆಚ್ಚಿಸುವ ಮಾತನಾಡುವುದು, ಇಷ್ಟಿದ್ದರೆ ಸಾಕೇ?. ಪಟಾಕಿ ಸಿಡಿಸಿ, ಬೆದರು ಗುಂಡು ಹಾರಿಸುವ ಹಳೆಯ ಪ್ರಯೋಗಗಳಿಗೆ ಇತಿಶ್ರೀ ಹಾಡಿ ನವೀನ ತಂತ್ರಜ್ಞಾನ ಬಳಕೆ ಮಾಡುವುದು, ಪರಿಹಾರೋಪಾಯಗಳಿಗೆ ತಜ್ಞರ ಸಲಹೆ ಪಡೆಯುವುದು ಬೇಡವೇ ಎನ್ನುವ ಪ್ರಶ್ನೆಗಳು ಜನರನ್ನು ಕಾಡುತ್ತಿದೆ.











