ಮಡಿಕೇರಿ ಸೆ.5 : ಕೆದಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಆರ್ ಆರ್ ಟಿ ಸಿಬ್ಬಂದಿ ಗಿರೀಶ್ ಕಾಡಾನೆ ದಾಳಿಗೊಳಗಾಗಿ ಮೃತಪಟ್ಟ ಹಿನ್ನೆಲೆ ಶಾಸಕ ಡಾ.ಮಂತರ್ ಗೌಡ ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಕೆದಕಲ್ ಗ್ರಾ.ಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದಲೂ ಆನೆ-ಮಾನವ ಸಂಘರ್ಷಣೆ ಗಳು ನಡೆಯುತ್ತಿದ್ದರು ವ್ಯವಸ್ಥಿತವಾಗಿ ಸರ್ಕಾರದ ಗಮನಕ್ಕೆ ತರದೇ ನಿರ್ಲಕ್ಷ್ಯ ವಹಿಸಿದ್ದ ವಿಚಾರವಾಗಿ ಸಭೆಯಲ್ಲಿ ಹಾಜರಿದ್ದ ಅರಣ್ಯ ಅಧಿಕಾರಿಗಳಿಗೆ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಇನ್ನೂ ಮುಂದೆ ವನ್ಯ ಪ್ರಾಣಿಗಳಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮವಹಿಸುವಂತೆ ಆದೇಶ ನೀಡಿದರು.
ಕಾಡಿನಿಂದ ಆನೆಗಳು ಜನವಾಸ ಪ್ರದೇಶಗಳು, ತೋಟಗಳಿಗೆ ಬರದಂತೆ ರೈಲ್ವೆ ಬ್ಯಾರಿಗೇಟ್ ಗಳು, ಟ್ರೆಂಚ್ ಗಳು, ಸೋಲಾರ್ ತಂತಿಗಳನ್ನು ತತ್ ಕ್ಷಣವೇ ಅಳವಡಿಸುವಂತೆ ಸೂಚಿಸಿ, ಅದಕ್ಕೆ ಸರ್ಕಾರದಿಂದ ಬೇಕಾಗುವ ಅನುದಾನಗಳನ್ನು ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ಈ ಸಂಧರ್ಭ ಗ್ರಾಮಸ್ಥರೊಂದಿಗೆ ಕಾಡಾನೆಗಳ ಹಾವಳಿ ವಿಚಾರವಾಗಿ ಶಾಸಕರು ಚರ್ಚಿಸಿ ಮಾಹಿತಿ ಪಡೆದುಕೊಂಡು ಅರಣ್ಯ ಅಧಿಕಾರಿಗಳೊಂದಿಗೆ ತಕ್ಷಣವೇ ಆನೆಗಳನ್ನು ಕಾಡಿಗಟ್ಟಲು ಬೇಕಾಗುವ ಸಂಪೂರ್ಣವಾದ ಸಹಕಾರ ನೀಡುವುದಾಗಿ ತಿಳಿಸಿದರು.
ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ಅಧಿಕಾರಿಗಳಿಗೆ ಕರೆ ಮಾಡಿದ್ದಲ್ಲಿ ಕರೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಸೂಚಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಡಿ.ಎಫ್.ಓ ಎ.ಟಿ ಪೂವಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಮಡಿಕೇರಿ ಮತ್ತು ಕುಶಾಲನಗರ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ, ಕುಶಾಲನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ವಿ.ಪಿ ಶಶಿಧರ್, ಪಂಚಾಯಿತಿಯ ಸಿಬ್ಬಂದಿಗಳು, ಕೆದಕಲ್ ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರುಗಳು, ಕೆದಕಲ್, ಹೊರೂರು ಮಠ, ಬೂತನಕಾಡು, ಮೋದೂರು ಭಾಗದ ಗ್ರಾಮಸ್ಥರು, ಸಂತ್ರಸ್ತರು ಹಾಜರಿದ್ದರು.