ನಾಪೋಕ್ಲು ಸೆ.4 : ಕ್ರೀಡೆ, ವಿದ್ಯಾಭ್ಯಾಸ ಸೇರಿದಂತೆ ಮಕ್ಕಳ ಅಭ್ಯುದಯದಲ್ಲಿ ಪೋಷಕರ ಪಾತ್ರ ಮುಖ್ಯ ಎಂದು ಲಯನ್ಸ್ ಕ್ಲಬ್ ನಾಪೋಕ್ಲು ವಲಯಾಧ್ಯಕ್ಷ ಮುಕ್ಕಾಟಿರ ವಿನಯ್ ಹೇಳಿದರು.
ಪೇರೂರು ಗ್ರಾಮದ “ಕೈಲ್’ಪೊಳ್ದ್” ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪೇರೂರು ಸರಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು, ಮಾತನಾಡಿದರು.
ಇಂದಿನ ಮಕ್ಕಳು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದ ವಿನಯ್ ಪೇರೂರು ಗ್ರಾಮ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಇಲ್ಲಿ ಜೀವಂತವಾಗಿರುವ ಪದ್ದತಿ ಪರಂಪರೆ ಇತರ ಗ್ರಾಮಗಳಿಗೂ ಮಾದರಿಯಾಗಿದೆ ಎಂದರು.
ಮಾಜಿ ಸೈನಿಕ ತಾಪಂಡ ನಾಗೇಶ್ ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮಂಡಲ ಪ್ರಧಾನರಾದ ಮೂವೇರ.ಸಿ.ನಾಣಪ್ಪ ವಹಿಸಿದ್ದರು. ಬಲ್ಲಮಾವಟಿ ಗ್ರಾ.ಪಂ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಮೇಕುಮಣಿಯಂಡ ಡಾಟಿ ಪೂವಯ್ಯ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬೊಟ್ಟೋಳಂಡ ರವಿ ಕರುಂಬಯ್ಯ ಹಾಜರಿದ್ದರು.
ಗ್ರಾಮಸ್ಥರಿಗೆ ಹಗ್ಗಜಗ್ಗಾಟ, ವಾಲಗತ್ತಾಟ್, ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮದುವೆಯಾದ ನೂತನ ದಂಪತಿಗಳನ್ನು ಸನ್ಮಾನಿಸಿ ಊರಿಗೆ ಪರಿಚಯಿಸಲಾಯಿತು. ಐವತ್ತು ವರ್ಷಗಳ ದಾಂಪತ್ಯ ಜೀವನ ಪೂರೈಸಿದ ದಂಪತಿಗಳ ಮತ್ತು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಊರಿನವರನ್ನು ಸನ್ಮಾನಿ ಗೌರವಿಸಲಾಯಿತು.
ಪಾಲೇಯಡ ಪೂವಮ್ಮ ಪ್ರಾರ್ಥಿಸಿ, ಚಂಗೇಟಿರ ಕುಮಾರ್ ಸೋಮಣ್ಣ ಕಾರ್ಯಕ್ರಮ ನಿರೂಪಿಸಿ, ಬೊಟ್ಟೋಳಂಡ ಮಿಟ್ಟುಪೂಣಚ್ಚ ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಮಚ್ಚುರ ರವೀಂದ್ರ, ಮೇಕುಮಣಿಯಂಡ ತಮ್ಮಯ, ತೋಲಂಡ ಅರುಣ ಕಾವೇರಪ್ಪ, ಪಾಲೇಯಡ ಸಂತೋಷ್, ಮಚ್ಚುರ ಯದುಕುಮಾರ್, ಅಪ್ಪಚ್ಚೀರ ನಂದಕುಮಾರ್, ಮಚ್ಚುರ ಶರಿ ಬೋಪಣ್ಣ, ಅಪ್ಪಚ್ಚೀರ ಸಜನ್ ಬೋಪಯ್ಯ , ಕ್ಲಬ್’ನ ಆಡಳಿತ ಮಂಡಳಿ ಸದಸ್ಯರಾದ ಹಾಗೂ ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಜರಿದ್ದರು. ಈ ಸಂದರ್ಭ ಕ್ರೀಡೆಯಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ