ಮಡಿಕೇರಿ ಸೆ.5 : ರಾಜ್ಯವನ್ನಾಳಿದ ಈ ಹಿಂದಿನ ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಕುರಿತು ಕಾಂಗ್ರೆಸ್ ಸರ್ಕಾರ ತನಿಖೆ ಆರಂಭಿಸಿದ್ದು, ಉಪ್ಪು ತಿಂದವರು ನೀರು ಕುಡಿಯಲೇಬೇಕು, ಶಿಕ್ಷೆ ಅನುಭವಿಸಲೇಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದ್ದಾರೆ.
ನಗರದ ಕಾವೇರಿ ಹಾಲ್ ನಲ್ಲಿ ನಡೆದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಾ ಕಾವುಂಗ, ಕಿಸಿಕೊ ಕಾನೆ ನಹೀ ದುಂಗಾ” ಎಂದು ಹೇಳುವ ಪ್ರಧಾನಮಂತ್ರಿಗಳು ಈ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಚಾರದ ವಿರುದ್ಧ ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ಕೋವಿಡ್ ಹಗರಣ, ಶೇ.40 ಕಮಿಷನ್ ದಂಧೆ ನಡೆದಿದೆ, ಇದನ್ನು ಖುದ್ದು ಗುತ್ತಿಗೆದಾರರ ಸಂಘವೇ ಬಹಿರಂಗ ಪಡಿಸಿತ್ತು. ಉಡುಪಿಯಲ್ಲಿ ಕಿರುಕುಳ ತಾಳಲಾರದೆ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದರು. ಹೀಗೆ ಎಲ್ಲಾ ಹಗರಣಗಳ ಕುರಿತು ಕಾಂಗ್ರೆಸ್ ಸರ್ಕಾರ ತನಿಖೆಯನ್ನು ಆರಂಭಿಸಿದೆ. ಚುನಾವಣೆ ಸಂದರ್ಭ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, ಇದೀಗ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸಿದ ಪರಿಣಾಮ ಜನ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿರ್ಧಾರವನ್ನು ಮಾಡಿದರು. ಇದೀಗ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿದ್ದು, ಕೇವಲ ನೂರು ದಿನಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಪೂರೈಸಿದೆ. ಮಹಿಳೆಯರಿಗಾಗಿ ಇರುವ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕ್ರಾಂತಿಕಾರಕವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿತ ಮಾಡಿತ್ತು. ಆದರೆ ನಮ್ಮ ಸರ್ಕಾರ 10 ಕೆ.ಜಿ ಅಕ್ಕಿಯನ್ನು ನೀಡುವ ಮೂಲಕ ನುಡಿದಂತೆ ನಡೆದಿದೆ. ಬಡವರಿಗೆ ನೀಡಲು ಅಕ್ಕಿ ನೀಡಿ ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡರೆ ಅಕ್ಕಿ ನೀಡಲು ಅದು ನಿರಾಕರಿಸಿದೆ ಎಂದು ಸಲೀಂ ಅಹಮ್ಮದ್ ಅಸಮಾಧಾನ ವ್ಯಕ್ತಪಡಿಸಿದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ಧಾಂತದೊಂದಿಗೆ ಕಾಂಗ್ರೆಸ್ ಪಕ್ಷ ಎಲ್ಲರ ಹಿತವನ್ನು ಕಾಯುತ್ತಿದೆ. ಕಾಂಗ್ರೆಸ್ ಪಕ್ಷದ ಮೇಲೆ ಜನರ ವಿಶ್ವಾಸ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ, ಈ ಸರ್ಕಾರದಿಂದ ಎಂದಿಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುವುದಿಲ್ಲ. ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
::: ಬೆಲೆ ಏರಿಕೆ ಮಾಡಿದಕ್ಕೆ ಮತ ಹಾಕಬೇಕೆ :::
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಯಾವ ಘನ ಕಾರ್ಯ ಮಾಡಿದೆ ಎಂದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಮತ ಹಾಕಬೇಕು. ವಿದೇಶದಲ್ಲಿರುವ ಕಪ್ಪು ಹಣವನ್ನು ತಲಾ 15 ಲಕ್ಷ ರೂ.ಗಳಂತೆ ಭಾರತೀಯರ ಖಾತೆಗೆ ಹಾಕಿದ್ದಾರೆಯೇ, ವರ್ಷದಲ್ಲಿ ಎರಡು ಕೋಟಿ ಉದ್ಯೋಗದಂತೆ ಕಳೆದ 9 ವರ್ಷಗಳಲ್ಲಿ 18 ಕೋಟಿ ಉದ್ಯೋಗವನ್ನು ಕೇಂದ್ರ ನೀಡಿದೆಯೇ ಎಂದು ಸಲೀಂ ಅಹಮ್ಮದ್ ಪ್ರಶ್ನಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡಿ ಜನಸಮಾನ್ಯರಿಗೆ ತೊಂದರೆ ನೀಡಿದಕ್ಕಾಗಿ ಬಿಜೆಪಿಗೆ ಮತ ನೀಡಬೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಕರೆ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ತಿರಸ್ಕಾರ ಮಾಡಲಿದ್ದು, ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವುದು ಖಚಿತ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮಾತನಾಡಿ ಲೋಕಸಭಾ ಚುನಾವಣೆಗೆ ಎಲ್ಲರೂ ಸನ್ನದ್ಧರಾಗಬೇಕು, ಇದು ದೇಶದ ಪ್ರಶ್ನೆಯಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪಣ ತೊಡಬೇಕು. ಬಿಜೆಪಿ ಎಂಬ ಗಿಡ ಈ ದೇಶದಲ್ಲಿ ಇರಬಾರದು, ಬಿಜೆಪಿ ಆಡಳಿತದಿಂದ ಯಾರಿಗೂ ಅನುಕೂಲವಾಗಿಲ್ಲ, ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇಡೀ ದೇಶ ನೆಮ್ಮದಿಯಿಂದ ಇರಬಹುದು ಎಂದು ತಿಳಿಸಿದರು.
ಸಣ್ಣಪುಟ್ಟ ಕೆಲಸಗಳು ಆಗಿಲ್ಲವೆಂದು ಪಕ್ಷ ಸಂಘಟನೆಯಲ್ಲಿ ನಿರಾಸಕ್ತಿ ತೋರಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳು ಅಣ್ಣತಮ್ಮಂದಿರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ, ಐದು ಗ್ಯಾರಂಟಿಗಳನ್ನು ಪೂರೈಸುವ ಮತ್ತು ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಸಾಲಗಳನ್ನು ತೀರಿಸುವ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ ಕೆಲವು ಕೆಲಸ ಕಾರ್ಯಗಳು ನಡೆಯುವಾಗ ಸ್ವಲ್ಪ ವಿಳಂಬವಾಗಬಹುದು. ಕಾರ್ಯಕರ್ತರು ಇದನ್ನೇ ದೊಡ್ಡ ಮಾಡಬಾರದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಶಾಂತಿನಗರದ ಶಾಸಕ ಎನ್.ಎ.ಹಾರಿಸ್ ಮಾತನಾಡಿ ರಾಜ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಪ್ರೀತಿಯಿಂದ ಜನ ಅಧಿಕಾರ ನೀಡಿದ್ದಾರೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ದೇಶವನ್ನು ಕಟ್ಟಿದೆ. ಇದೇ ಒಗ್ಗಟ್ಟು ಪಕ್ಷದ ಬಲವರ್ಧನೆಯಲ್ಲೂ ಮುಂದುವರೆಯಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದಂತೆ ಕೇಂದ್ರದಲ್ಲೂ ತರಬೇಕು ಎಂದು ಕರೆ ನೀಡಿದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತದೆ, ಆದರೆ ಕಾಂಗ್ರೆಸ್ ಪ್ರತಿ ದ್ವೇಷ ಮಾಡದೆ ನಾವೆಲ್ಲರೂ ಒಂದೇ ಎನ್ನುವ ಸಿದ್ಧಾಂತದಡಿ ಮುಂದೆ ಸಾಗುತ್ತಿದೆ. ಕೊಡಗಿನಲ್ಲಿ ಕಾಂಗ್ರೆಸ್ ಗೆದ್ದಿದೆ, ಮತ್ತೆ ಎಂದಿಗೂ ಜಿಲ್ಲೆಯನ್ನು ಬೇರೆ ಪಕ್ಷಕ್ಕೆ ಬಿಟ್ಟುಕೊಡಬಾರದು ಎಂದರು.
ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರು, ಕೂಲಿ ಕಾರ್ಮಿಕರು ಹಾಗೂ ಬೆಳೆಗಾರರಿಗೂ ತೊಂದರೆಯಾಗುತ್ತಿದೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಹಾರಿಸ್ ಹೇಳಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಭ್ರಷ್ಟಾಚಾರಗಳನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರಿಗೆ ಶಿಕ್ಷಯಾಗುವವರೆಗೆ ಬಿಡುವುದಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಸರ್ಕಾರದಿಂದ ಸಮಾಜಿಕ ನ್ಯಾಯ ದೊರೆಯುತ್ತಿದೆ ಎಂದರು.
ಕೋವಿಡ್ ಹಗರಣ, ಗುತ್ತಿಗೆ ಕಾಮಗಾರಿಯಲ್ಲಿ ಕಮಿಷನ್, ಪಿಎಸ್‍ಐ ನೇಮಕಾತಿ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸರ್ಕಾರ ಸಮಿತಿಗಳನ್ನು ರಚಿಸಿದ್ದು, ಸುಲಭವಾಗಿ ಬಿಡುವುದಿಲ್ಲ ಎಂದು ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
::: ಅಧಿಕಾರ ಸ್ವೀಕಾರ :::
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರಾಗಿ ಪಿ.ಎ.ಹನೀಫ್ ಅವರು ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
Breaking News
- *ಪ್ರತೀ ಜಿಲ್ಲೆಯಲ್ಲೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ : ಸಿ.ಎಂ ಘೋಷಣೆ*
- *ಖೋ ಖೋ ವಿಶ್ವಕಪ್ : ರಾಜ್ಯದ ಇಬ್ಬರು ಆಟಗಾರರಿಗೆ ತಲಾ 5 ಲಕ್ಷ ರೂ. ಘೋಷಿಸಿದ ಸಿಎಂ*
- *ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನದ ಆಕರ್ಷಣೆ*
- *ರೈಲ್ವೆ ಇಲಾಖೆಯ 32,438 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ*
- *ಭಾಗಮಂಡಲ ಗ್ರಾ.ಪಂ ವತಿಯಿಂದ ಅಂಗನವಾಡಿಗಳಿಗೆ ಕೊಡುಗೆ*
- *ಗಣರಾಜ್ಯೋತ್ಸವದಂದು ಸಿಎನ್ಸಿಯಿಂದ ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಪ್ರಾಣಿ ದಯಾಸಂಘದ ವಾರ್ಷಿಕ ಮಹಾಸಭೆ : ಹಲವು ವಿಚಾರ ಕುರಿತು ಚರ್ಚೆ*
- *ರಾಜಾಸೀಟು ಉದ್ಯಾನದಲ್ಲಿ ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ : ಶಾಸಕ ಡಾ.ಮಂತರ್ ಗೌಡ ಉದ್ಘಾಟನೆ*
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಆಕರ್ಷಣೆ*
- *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣಾ ಶಿಬಿರ*