ಮಡಿಕೇರಿ ಸೆ.5 : ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ 2022-23ನೇ ಸಾಲಿನಲ್ಲಿ 30.33 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಪ್ರಸ್ತುತ ಸಾಲಿನಲ್ಲಿ 298.50 ಲಕ್ಷ ವಹಿವಾಟು ನಡೆಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಮುಖೇನ ಸದಸ್ಯರುಗಳಿಗೆ 2983.66 ಲಕ್ಷ ರೂ. ಸಾಲವನ್ನು ವಿವಿಧ ರೂಪಗಳಲ್ಲಿ ನೀಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಜಾಮೀನು ಸಾಲವಾಗಿ 637.97 ಲಕ್ಷ ರೂ., ಮನೆ ಆಧಾರ ಸಾಲವಾಗಿ 1080.62 ಲಕ್ಷ ರೂ., ಚಿನ್ನಾಭರಣಗಳ ಈಡಿನ ಸಾಲವಾಗಿ 947.06 ಲಕ್ಷ ರೂ.ಗಳನ್ನು ನೀಡಲಾಗಿದೆ. ಸಾಲ ವಸೂಲಾತಿ ಶೇ.95.62 ರಷ್ಟು ಆಗಿದೆ ಎಂದರು.
ಬ್ಯಾಂಕಿನ ದುಡಿಯುವ ಬಂಡವಾಳ 5015.83 ಲಕ್ಷವಾಗಿದ್ದು, ಇದು ಕಳೆದ ಸಾಲಿಗಿಂತ 571.35 ಲಕ್ಷ ರೂ. ಹೆಚ್ಚಿನದ್ದಾಗಿದೆ. ಬ್ಯಾಂಕ್ ಪ್ರಸ್ತುತ 4426.99 ರಷ್ಟು ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಇದು ಕಳೆದ ಸಾಲಿಗಿಂತ 496.42 ಲಕ್ಷ ರೂ.ಗಳಷ್ಟು ಹೆಚ್ಚಿನದ್ದಾಗಿದೆ. ಠೇವಣಾತಿಗಳ ಮೇಲೆ ಪೂರ್ಣ ಪ್ರಮಾಣದ ಡೆಪಾಸಿಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ನಲ್ಲಿ ವಿಮೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಹಕರು ಬ್ಯಾಂಕಿನಲ್ಲಿರುವ ಠೇವಣಾತಿಗಳಿಗೆ ಕನಿಷ್ಟ ಶೇ.2ರಿಂದ ಗರಿಷ್ಠ ಶೇ.7.65 ರವರೆಗೆ ಬಡ್ಡಿ ನಿಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಒಂದು ವರ್ಷ ಹಾಗೂ ಮೇಲ್ಪಟ್ಟು ಇಡುವಂತಹ ಠೇವಣಾತಿಗಳಿಗೆ ಶೇ.0.50 ಹೆಚ್ಚನ ಬಡ್ಡಿ ನೀಡಲಾಗುತ್ತಿದೆ. ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.
ಬ್ಯಾಂಕಿನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್ಎಸ್ಎಲ್ಸಿ , ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ, ಗೌರವ ಧನವನ್ನು ನೀಡಲಾಗುತ್ತಿದೆಯೆಂದು ಅಧ್ಯಕ್ಷ ಬಾಲಕೃಷ್ಣ ವಿವರಿಸಿದರು.
ಬ್ಯಾಂಕ್ನ ಸಮಗ್ರ ಬೈಲಾ ತಿದ್ದುಪಡಿಯನುಸಾರ ಸದಸ್ಯರು ಹೊಂದಿರಬೇಕಾದ ಕನಿಷ್ಟ ಪಾಲು ಹಣ 1 ಸಾವಿರ ರೂ., ಹೊಂದಿರಬಹುದಾದ ಕನಿಷ್ಟ ಠೇವಣಿ 2500 ರೂ.ಗಳಾಗಿದೆ. ಸದಸ್ಯರು ತಮ್ಮ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ ನಡೆಸುವ ವಾರ್ಷಿಕ ವ್ಯವಹಾರಗಳ ಸಂಖ್ಯೆ 2 ಆಗಿರುತ್ತದೆ. ಸದಸ್ಯರು ಹಿಂದಿನ 5 ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಟ 2 ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ ಅಥವಾ 2 ನಿರಂತರ ಸಹಕಾರ ವರ್ಷಗಳಲ್ಲಿ ಮೇಲಿನ ಯಾವುದೇ ರೀತಿಯ ವ್ಯವವಹಾರ ನಡೆಸದಿದ್ದಲ್ಲಿ ಸದಸ್ಯರು ಮತದಾನದ ಹಕ್ಕನ್ನು ಒಂದು ವರ್ಷದವರೆಗೆ ಕಳೆದುಕೊಳ್ಳುವುದಲ್ಲದೆ, ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
::: ಲಾಭದಲ್ಲಿ ಜಿ.ಟಿ. ಶಾಖೆ :::
ಬ್ಯಾಂಕಿನ ಜಿ.ಟಿ. ರಸ್ತೆ ಶಾಖೆಯಲ್ಲಿ 1587.71 ಲಕ್ಷದಷ್ಟು ಒಟ್ಟು ವ್ಯವಹಾರ ನಡೆಸಲಾಗಿದ್ದು, 15.72 ಲಕ್ಷ ಲಾಭ ಗಳಿಸಲಾಗಿದೆ. ಶಾಲೆ ಒಟ್ಟು 907.73 ಲಕ್ಷ ಠೇವಣಿ ಹೊಂದಿದ್ದು, 679.98 ಲಕ್ಷವನ್ನು ವಿವಿಧ ರೂಪದ ಸಾಲವಾಗಿ ನೀಡಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ.ಕೆ.ಜಗದೀಶ್, ನಿರ್ದೇಶಕರಾದ ಎಸ್.ಸಿ. ಸತೀಶ್, ಕನ್ನಂಡ ಸಂಪತ್ ಕುಮಾರ್, ಜಿ.ಎಂ. ಸತೀಶ್ ಪೈ ಹಾಗೂ ಬಿ.ಎಂ.ರಾಜೇಶ್ ಉಪಸ್ಥಿತರಿದ್ದರು.









