ಮಡಿಕೇರಿ ಸೆ.5 : ಬಿಜೆಪಿ ಸರ್ಕಾರದ ರೈತಪರ ಯೋಜನೆ ಮುಂದುವರಿಸಬೇಕು ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಸೆ.8 ರಂದು ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಯಲಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಖಂಡಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾದ್ಯಂತ ಸೆ.8 ರಂದು ಪ್ರತಿಭಟನೆ ನಡೆಸಲಿದೆ. ಅಂದು ಮಡಿಕೇರಿ ನಗರ, ಮಡಿಕೇರಿ ಗ್ರಾಮಾಂತರ, ವಿರಾಜಪೇಟೆ ಹಾಗೂ ಸೋಮವಾರಪೇಟೆ ಸೇರಿದಂತೆ ಜಿಲ್ಲೆಯ ನಾಲ್ಕು ಮಂಡಲದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದರು.
ಮಳೆಯ ಅಭಾವದಿಂದ ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು, ರೈತರ ಜಮೀನುಗಳಲ್ಲಿ ಇರುವ ತೆರೆದ ಬಾವಿಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲು 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು, ರೈತರ ಆತ್ಮಹತ್ಯೆಯಂತಹ ಅನಾಹುತಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಕಮ್ಮಿಕೊಳ್ಳಬೇಕು, ಬಿಜೆಪಿ ರಾಜ್ಯ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಗೊಂದು ಗೋಶಾಲೆ ಯೋಜನೆಯನ್ನು ಹಿಂಪಡೆಯುವ ನಿರ್ಧಾರವನ್ನು ಕೈಬಿಡಬೇಕು, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರದ್ದುಗೊಳಿಸುವ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ರಾಜ್ಯ ರೈತ ಮೋರ್ಚಾದ ಕಾರ್ಯಕರಿಣಿ ಸದಸ್ಯೆ ಯಮುನಾ ಚಂಗಪ್ಪ ಮಾತನಾಡಿ, ಚುನಾವಣೆ ಸಂದರ್ಭ ಬಿಟ್ಟಿ ಭಾಗ್ಯ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ನೂರು ದಿನಗಳಲ್ಲೇ ತೆರಿಗೆ ಹೆಚ್ಚಿಸಿ, ಜನಸಾಮಾನ್ಯರು ಸಂಕಷ್ಟ ಪಡುವಂತೆ ಮಾಡಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾದ ಮಡಿಕೇರಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಎನ್.ಸಿ.ಅನಂತ್ ಹಾಗೂ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮರ್ಚಂಡ ಪ್ರಕಾಶ್ ಬೆಳ್ಯಪ್ಪ ಉಪಸ್ಥಿತರಿದ್ದರು.









