ವಿರಾಜಪೇಟೆ ಸೆ.5 : ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳು ಸಂಭ್ರಮದಿಂದ ಆಚರಿಸಿದರು.
ಕಾಲೇಜಿನ ಪ್ರಾಂಶುಪಾಲ ಎನ್.ಎಂ.ನಾಣಯ್ಯ ಮಾತನಾಡಿ, ಶಿಕ್ಷಣವನ್ನು ಪಡೆಯಬೇಕೆಂದರೆ ಗುರುವಿನ ನುಡಿಗಳನ್ನು ಮನಸ್ಸಿಟ್ಟು ಕೇಳಬೇಕು. ಅದನ್ನು ಪರಿಪಾಲಿಸುವುದು ವಿದ್ಯಾರ್ಥಿಗಳ ಕರ್ತವ್ಯ. ಗುರುವಿಗೆ ಗೌರವವನ್ನು ನೀಡಬೇಕೆಂದು ಗುರುವಿನ ಮಹತ್ವವನ್ನು ತಿಳಿಸಿಕೊಟ್ಟರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ಎ.ಎಂ.ಡೈನಾ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹಿತನುಡಿಗಳನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ರೀತಿಯ ಆಟೋಟ, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಇದೇ ಸಂದರ್ಭ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಪ್ರಾರಂಭದಲ್ಲಿ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿಗಳಾದ ದೀಷ್ಮ ಮತ್ತು ತಂಡದವರಿಂದ ಪ್ರಾರ್ಥನೆ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಕಾವ್ಯ ಸ್ವಾಗತಿಸಿದರು. ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಕುಮಾರಿ ಕಾವೇರಮ್ಮ ವಂದಿಸಿದರೆ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಹಸೀನಾ ಮತ್ತು ಸುಶ್ಮಿತಾ ನಿರೂಪಿಸಿದರು.









