ಮಡಿಕೇರಿ ಸೆ.6 : ಚೇರಂಬಾಣೆ ವೃತ್ತ, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಕೀಲರ ಸಂಘ ಕೊಡಗು, ಬೆಟ್ಟಗೇರಿ ಗ್ರಾ.ಪಂ ಸಹಯೋಗ ದೊಂದಿಗೆ ಅಪ್ಪಂಗಳ ಸಮುದಾಯ ಭವನದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರ ಸಪ್ತಾಹ, ಮಾತೃ ವಂದನ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಾನಸಿಕ, ಭೌತಿಕ ಹಾಗೂ ದೈಹಿಕವಾಗಿ ಆರೋಗ್ಯದ ಬೆಳವಣಿಗೆ ಆಗಬೇಕೆಂದು ಯೂನಿಸೆಫ್ ಚಿಂತನೆಯಾಗಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೈಕಟಕುವಂತೆ ಪೌಷ್ಟಿಕಾಂಶ ದೊರಕಬೇಕೆಂಬುದು ತಿಳಿಸಲಾಗಿದೆ. ಪೌಷ್ಟಿಕತೆ ಎನ್ನುವುದು ಕೇವಲ ಪ್ರಾಪ್ತ ವಯಸ್ಸಿನವರಿಗೆ ಮಾತ್ರವಲ್ಲದೆ ಪ್ರಸವಪೂರ್ವ ಮಗುವಿನಿಂದಲೂ ಉತ್ತಮ ಪೌಷ್ಟಿಕತೆ ಪ್ರಾರಂಭವಾಗುತ್ತದೆ. ಅದಕ್ಕಾಗಿ ಸರ್ಕಾರದ ಯೋಜನೆಗಳನ್ನು ಸಮಾಜಕ್ಕೆ ಹತ್ತಿರವಾಗಿರುವ ಅಂಗನವಾಡಿ ಕೇಂದ್ರಗಳ ಮೂಲಕ ವಿತರಣೆಯಾಗುತ್ತದೆ ಎಂದು ತಿಳಿಸಿದರು.
ಬಡತನ ನಿರ್ಮೂಲನೆ ಬಗ್ಗೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಯೋಜನೆಯಾದ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ” ಬಡತನ ನಿರ್ಮೂಲನೆ 2015″ ಎಂಬ ಯೋಜನೆ ಇದ್ದು ಅದರಂತೆ ಸರ್ಕಾರದ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರೈಸುವ ಬಗ್ಗೆ ಅನಿರೀಕ್ಷಿತ ಭೇಟಿಯ ಮೂಲಕ ಪರಿಶೀಲಿಸಲಾಗುವುದು ಎಂದರು.
ಎಲ್ಲಾ ಯೋಜನೆಗಳ ಪರಿಣಾಮಕಾರಿಯ ಅನುಷ್ಠಾನವು ಕೇವಲ ಸಂಬಂಧಿಸಿದ ಇಲಾಖೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ಗ್ರಾ.ಪಂ ಅಧ್ಯಕ್ಷರಾದ ಕಮಲ ಉತ್ತಯ್ಯ ಮಾತನಾಡಿದ ಶುಭ ಹಾರೈಸಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉದಯ ಮಾತನಾಡಿ ಉತ್ತಮ ಆರೋಗ್ಯ ಇದ್ದರೆ ಏನಾದರೂ ಜೀವನದಲ್ಲಿ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಪರಿಶ್ರಮಕ್ಕೆ ಗ್ರಾಮ ಪಂಚಾಯತಿ ವತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸವಿತಾ ಕೀರ್ತನ್ ಮಾತನಾಡಿ, ಸಮತೋಲನ ಆಹಾರದ ಮಹತ್ವ,ಇಲಾಖೆ ಸೌಲಭ್ಯಗಳು, ಮಾತೃ ವಂದನ ಸಪ್ತಾಹ, ರಾಷ್ಟ್ರೀಯ ಪೋಷಣ್ ಮಾಸಾಚರಣೆಯ ಮಹತ್ವ, ಸಮುದಾಯ ಆಧಾರಿತ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೋಷಣ ಅಭಿಯಾನ ಜಿಲ್ಲಾ ಸಂಯೋಜಕರಾದ ಕಾವ್ಯ, ಚೇರಂಬಾಣೆ ವೃತ್ತದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಅಪ್ಪಂಗಳ, ಹೆರವನಾಡು ಶಾಲೆ, ಹೆರವನಾಡು ಕಾಲೋನಿ, ಬೆಟ್ಟಗೇರಿ, ಉಡೊತ್ ಮೊಟ್ಟೆ ಮಹಿಳೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆ ಸ್ವಪ್ನ ಪ್ರಾರ್ಥಿಸಿದರು. ಕಾನೂನು ಸೇವಾ ಪ್ರಾಧಿಕಾರ ಜೋಯಪ್ಪ ನಿರೂಪಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಕೀರ್ತನ್ ಸ್ವಾಗತಿಸಿದರು. ಕೆ.ಎಸ್.ತೇಜಸ್ವಿನಿ ವಂದಿಸಿದರು.