ನಾಪೋಕ್ಲು ಸೆ.6 : ದಾರ್ಶನಿಕ, ತತ್ವಜ್ಞಾನಿ, ಶಿಕ್ಷಣ ತಜ್ಞ, ಪ್ರಾಧ್ಯಾಪಕ, ಕುಲಪತಿಗಳಾಗಿ ರಾಧಾಕೃಷ್ಣ ಅವರು ಸಲ್ಲಿಸಿದ ಅಪ್ರತಿಮ ಸೇವೆ ಸ್ಮರಣೀಯ ಎಂದು ನಿರ್ದೇಶಕ ಕಲ್ಯಾಟಂಡ ಪೂಣಚ್ಚ ಹೇಳಿದರು.
ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಲೆಯ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದ ಅಪ್ಪಣ್ಣ ಮಾತನಾಡಿ, ಶಿಕ್ಷಕರ ಸ್ವಾರ್ಥ ರಹಿತ ಸೇವೆಯಿಂದ ವಿದ್ಯಾರ್ಥಿಗಳು ಮುಂದಿನ ಸಮಾಜದ ಉತ್ತಮ ಪ್ರಜೆಗಳಾಗಬಲ್ಲರು. ಡಾ.ರಾಧಾಕೃಷ್ಣನ್ ತಮ್ಮ ಆದರ್ಶಗಳ ಮೂಲಕ ಸಮಾಜಕ್ಕೆ ಮಾದರಿಯಾದರು. ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದ ಅವರು ಮುಂದಿನ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ತರವಾದುದು ಎಂದರು.
ಹಿರಿಯ ಶಿಕ್ಷಕಿ ಮುಂಡಂಡ ಕವಿತಾ ಅಯ್ಯಣ್ಣ, ಶಿಕ್ಷಕಿ ಮರ್ಲಿನ್ ಪ್ರಿಯಾ ಮಾತನಾಡಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿ ಬೋಪಯ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಬೊಳ್ಳಚೆಟ್ಟಿರ ಸುರೇಶ್ ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿ ಸಂಸ್ಥೆಯ ವತಿಯಿಂದ ಎಲ್ಲಾ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿ ನಸೀರಾ, ವರ್ಷ ಮತ್ತು ದೀಕ್ಷಾ ತಂಡ ಪ್ರಾರ್ಥಿಸಿ, ವಿದ್ಯಾರ್ಥಿನಿ ಫಾತಿಮತ್ ನಿಹಾಲ ಸ್ವಾಗತಿಸಿದರು. ಬಿ.ಎಸ್.ಸಹನಾ ವಂದಿಸಿದರು.
ವರದಿ : ದುಗ್ಗಳ ಸದಾನಂದ