ಬೆಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರಿನ ಮಲ್ಲೇಶ್ವರಂ ವಾರ್ಡ್‌ನಲ್ಲಿ ಫುಟ್‌ಪಾತ್ ಅಡಿಯಲ್ಲಿ ಟ್ರಾನ್ಸ್‌ಫಾರ್ಮರ್ ಸೆಂಟರ್ ಕೇಂದ್ರ ಸ್ಥಾಪಿಸಿದೆ.
ಬೆಂಗಳೂರು ಜನ-ಜಾನುವಾರುಗಳಿಗೆ ವಿದ್ಯುತ್ ಅವಘಡಗಳಿಂದ ತಪ್ಪಿಸುವುದು ಸೇರಿ ಪಾದಚಾರಿ ಮಾರ್ಗಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾರ್ಯಕ್ಕೆ ಗುಡ್ ಬೈ ಹೇಳಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರದ 15ನೇ ಕ್ರಾಸ್ ನಲ್ಲಿ 500 ಕೆವಿಎ ಸಾಮರ್ಥ್ಯದ ‘ಭೂಗತ ವಿದ್ಯುತ್ ಪರಿವರ್ತಕ’ವನ್ನು ಅಳವಡಿಸಲಾಗಿದೆ.
ಬೆಸ್ಕಾಂ ಮತ್ತು ಬಿಬಿಎಂಪಿ ಸಹಯೋಗದಲ್ಲಿ 1.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಭೂಗತ ವಿದ್ಯುತ್ ಪರಿವರ್ತಕ’ಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಂಗಳವಾರ ಚಾಲನೆ ನೀಡಿದರು. ಬೆಸ್ಕಾಂನಲ್ಲಿನ ತಾಂತ್ರಿಕ ನಾವಿನ್ಯತಾ ಕೇಂದ್ರದ (ಟಿಐಟಿ) ಉಪ ಪ್ರಧಾನ ವ್ಯವಸ್ಥಾಪಕ ಕೆ. ಬಾಲಾಜಿ ನೇತೃತ್ವದ ತಂಡವು ತಾಂತ್ರಿಕ ಕೆಲಸಗಳನ್ನು ಮಾಡಿದೆ. ಈ ಯೋಜನೆಯ ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ಹಾಗೂ ಬೆಸ್ಕಾಂ 1.33 ಕೋಟಿ ರೂ. ವೆಚ್ಚ ಮಾಡಿದೆ. 14 ಮೀ. ಉದ್ದ, 5 ಮೀ. ಅಗಲ ಮತ್ತು 4 ಮೀ. ಆಳದಲ್ಲಿ ಭೂ ಪರಿವರ್ತಕವನ್ನು ಅಳವಡಿಸಲಾಗಿದೆ. 2020ರ ಮೇ ನಲ್ಲಿ ಕಾಮಗಾರಿ ಆರಂಭಿಸಿ 2023ರ ಮೇ ನಲ್ಲಿ ಪೂರ್ಣಗೊಳಿಸಿದೆ.