ಸೋಮವಾರಪೇಟೆ ಸೆ.6 : ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ಉದ್ಯೋಗ ಮಾಹಿತಿ ಘಟಕದ ವತಿಯಿಂದ, ಉನ್ನತ ಶಿಕ್ಷಣ ಮತ್ತು ಉದ್ಯೋಗ ಮಾಹಿತಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಮೇಜರ್ ಸತೀಶ್ ಮಾತನಾಡಿ, ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ, ವಿದ್ಯಾರ್ಥಿ ದೆಸೆಯಲ್ಲಿ ಸ್ಪಷ್ಟವಾದ ಗುರಿ ಹೊಂದಿರುವುದು ಮತ್ತು ಗುರಿಯನ್ನು ತಲುಪುವ ನಿಟ್ಟಿನಲ್ಲಿ ಅವಿರತವಾದ ಶ್ರಮಪಡುವುದು ಅತ್ಯಾವಶ್ಯಕ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸು ಗಳಿಸುವುದು ಅಸಾಧ್ಯವೇನಲ್ಲ. ಗ್ರಾಮೀಣ ಹಿನ್ನೆಲೆಯವರು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಆರ್ಥಿಕವಾಗಿ ದುರ್ಬಲರು ಇತ್ಯಾದಿ ಋಣಾತ್ಮಕ ವಿಚಾರಗಳನ್ನು ಬದಿಗಿಟ್ಟು ನಿರಂತರ ಪರಿಶ್ರಮ ಪಡಬೇಕಿದೆ. ಕಲಿಕೆಗೆ ಬಡವ ಬಲ್ಲಿದ ಎಂಬ ತಾರಾತಮ್ಯ ಇಲ್ಲ ಎಂದರು.
ಯಶಸ್ಸುಗಳಿಸುವ ನಿಟ್ಟಿನಲ್ಲಿ ಅಡ್ಡದಾರಿಗಳನ್ನು ಹುಡುಕುವ ವ್ಯರ್ಥ ಪ್ರಯತ್ನ ಬಿಟ್ಟು ಮುನ್ನೆಡೆಯಬೇಕಿದೆ. ನಿರಂತರ ಪರಿಶ್ರಮಪಟ್ಟಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿ ದೆಸೆಯಲ್ಲಿ ಎದುರಾಗುವ ಅನವಶ್ಯಕ ಪ್ರಲೋಚನೆಗಳತ್ತ ಆಕರ್ಷಿತರಾಗದೇ ಗುರಿಯ ಕಡೆ ಗಮನ ಹರಿಸಿ, ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಹೆಚ್. ಧನಲಕ್ಷ್ಮೀ, ಉದ್ಯೋಗ ಮಾಹಿತಿ ಘಟಕದ ಸಂಯೋಜಕ ಪಿ.ಪಾವನಿ, ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಯೋಜಕ ಎಂ.ಎಸ್. ಶಿವಮೂರ್ತಿ ಹಾಜರಿದ್ದರು.









