ಮಡಿಕೇರಿ ಸೆ.7 : ಮೈಸೂರಿನ ಅಲ್ ಅನ್ಸಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವಿರಾಜಪೇಟೆ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸೆ.10 ರಂದು ಮಂಡಿ ಮತ್ತು ಸೊಂಟದ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಉಚಿತ ಸಮಾಲೋಚನೆ, ಸಲಹೆ ಮತ್ತು ತಪಾಸಣಾ ಶಿಬಿರ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಜಪೇಟೆ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸದಸ್ಯ ಏಜಸ್ ಅಹಮ್ಮದ್, ವಿರಾಜಪೇಟೆಯ ಗೋಣಿಕೊಪ್ಪ ರಸ್ತೆಯಲ್ಲಿರುವ ವೈಟ್ ಪ್ಯಾಲೇಸ್‍ನಲ್ಲಿ ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಲ್ ಅನ್ಸಾರ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಸೊಂಟದ ಕೀಲು ಮತ್ತು ಮಂಡಿ ಮರು ಜೋಡಣೆ ಶಸ್ತ್ರ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಅಲ್ ಅನ್ಸಾರ್ ಆಸ್ಪತ್ರೆಯ ವ್ಯವಸ್ಥಾಪಕ ಅಬ್ದುಲ್ ಮಾತನಾಡಿ, ಮಂಡಿ, ಕೀಲು ನೋವಿನಿಂದ ಬಳಲುವವರು ಒಮ್ಮೆ ಶಿಬಿರಕ್ಕೆ ಭೇಟಿ ನೀಡಿ ತಜ್ಞ ವೈದ್ಯರಿಂದ ಸಲಹೆ ಪಡೆದುಕೊಳ್ಳಬಹುದು. ಫಿಸಿಯೋಥೆರಪಿ ಸಮಾಲೋಚನೆಯೂ ನಡೆಯಲಿದ್ದು, ಶಿಬಿರದಲ್ಲಿ ಜಂಟಿ ಬದಲಿ ಶಸ್ತ್ರಚಿಕಿತ್ಸೆಯ ವೀಡಿಯೋ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅಬ್ದುಲ್ ಜಲೀಲ್, ಸುಹೈಲ್, ಅಜೀಜ್, ರಜಿನಿ ವಿನೋದ್ ಹಾಜರಿದ್ದರು.