ಶನಿವಾರಸಂತೆ ಸೆ.8 : ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ಪ್ರತಿಭಾ ಕಾರಂಜಿ -ಕಲೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ತಜ್ಞ ಬೆಂಗಳೂರಿನ ಎ.ಎಸ್.ಸಾಗರ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಸಮೂಹ ಸಂಪನ್ಮೂಲ ಕೇಂದ್ರ, ಕೊಡ್ಲಿಪೇಟೆ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ನಡೆದ ಕೊಡ್ಲಿಪೇಟೆ ಮತ್ತು ಬೆಸೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ -ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪರೀಕ್ಷೆ ಪಾಸ್ ಆಗಲು ಮಾತ್ರ ಯೋಚನೆ ಮಾಡಬೇಡಿ. ಉತ್ತಮ ಜ್ಞಾನವನ್ನು ಬೆಳೆಸಿಕೊಂಡಲ್ಲಿ ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡುವ ಸಾಮರ್ಥ್ಯ ಬರುತ್ತದೆ ಎಂದರು.
ಕೇವಲ ಅಂಕಗಳಿಕೆಗಾಗಿ ಓದದೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಜ್ಞಾನಾರ್ಧನೆ ಹೊಂದಿ ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳವೇಕು ಎಂದರು. ಇದೇ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಹೊರತರಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.
ಮಕ್ಕಳ ಮುಂದಿನ ಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಪೂರಕವಾಗುತ್ತದೆ. ಅತ್ಯುತ್ತಮ ಪ್ರತಿಭೆಯನ್ನು ಹೊಂದಿರುವ ಮಕ್ಕಳ ಮುಂದಿನ ಸಾಧನೆಗೆ ವಿದ್ಯಾಸಂಸ್ಥೆ ಹಾಗೂ ವೈಯಕ್ತಿಕ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆರ್. ರವೀಶ್ ಮಾತನಾಡಿ, ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ವೇದಿಕೆಗಳು ಬೇಕು. ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಮೂಲಕ ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದೆ ಎಂದರು.
ಗಮನ ಸೆಳೆದ ವಿವಿಧ ಸ್ಪರ್ಧೆಗಳು : ತರಗತಿ 1 ರಿಂದ 4 ಹಾಗೂ 5 ರಿಂದ 7 ರವರೆಗಿನ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಂಠಪಾಠ ಸ್ಪರ್ಧೆ, ಧಾರ್ಮಿಕ ಶ್ಲೋಕ, ಸುಗಮ ಸಂಗೀತ, ಫ್ಯಾನ್ಸಿ ಉಡುಗೆ, ಚಿತ್ರಕಲೆ, ಕಥೆಯನ್ನು ಹೇಳುವುದು, ಮಣ್ಣಿನ ಆಕೃತಿ ಮಾಡುವುದು,5 ರಿಂದ 7 ರವರೆಗಿನ ವಿದ್ಯಾರ್ಥಿಗಳಿಗೆ ತಂಡಗಳ ಸ್ಪರ್ಧೆಗಳಿಗಾಗಿ ಜಾನಪದ ನೃತ್ಯ, ದೇಶಭಕ್ತಿ ಗೀತೆಗಳು, ಕೋಲಾಟ, ರಸಪ್ರಶ್ನೆ,
8 ರಿಂದ 10 ತರಗತಿಯ ವಿದ್ಯಾರ್ಥಿಯ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಷಣ, ಕಂಠಪಾಠ, ಧಾರ್ಮಿಕ ಶ್ಲೋಕ ಯೋಗಾಸನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಹಾಡು, ಸುಗಮ ಸಂಗೀತ, ಭರತನಾಟ್ಯ, ಮಣ್ಣಿನ ಆಕೃತಿ ಮಾಡುವುದು, ಅಣಕು ನಟನೆ, ಪ್ರಬಂಧ ಬರೆಯುವುದು, ಚರ್ಚಾ ಸ್ಪರ್ಧೆ, ರಂಗೋಲಿ, ಗಜಲ್, ಜಾನಪದ ನೃತ್ಯ, ಕೋಲಾಟ, ರಸಪ್ರಶ್ನೆ ಕಾರ್ಯಚಟುವಟಿಕೆಗಳು ನಡೆದವು.
ಈ ಸಂದರ್ಭ ಬ್ಯಾಡಗೊಟ್ಟ ಗ್ರಾ.ಪಂ ಅಧ್ಯಕ್ಷ ಹನೀಫ್, ಬೆಸೂರು ಗ್ರಾ.ಪಂ ಅಧ್ಯಕ್ಷೆ ಕಮಲಮ್ಮ,
ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಂ.ಹೇಮಂತ್, ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ್ ಅಧ್ಯಕ್ಷ ಎಚ್.ಎನ್.ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜು,ಶಿಕ್ಷಣ ಸಂಯೋಜಕ ಎಚ್.ಆರ್.ಶೇಖರ್,
ಕೊಡ್ಲಿಪೇಟೆ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಉಪಾಧ್ಯಕ್ಷ ಶಂಭುಲಿಂಗಪ್ಪ,ಖಜಾಂಜಿ ಡಾ.ಉದಯಕುಮಾರ್, ನಿರ್ದೇಶಕರಾದಯು.ವಿ.ಶಿವಪ್ರಸಾದ್,ಬಿ.ಕೆ.ಯತೀಶ್,ಡಿ.ವಿ.ಹರೀಶ್, ಸುಲೋಚನ ಗಿರೀಶ್, ಆಡಳಿತಾಧಿಕಾರಿ ಜಗದೀಶ್ ಬಾಬು, ಹಲಸಿನಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಆರ್.ನಿರಂಜನ್,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಪವರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎನ್.ಅಬ್ದುಲ್ ರಬ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.