ಮಡಿಕೇರಿ ಸೆ.8 : ಬೀಬಿ ಫಾತಿಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರು ಅಲ್-ಅನ್ಸಾರ್ ಆಸ್ಪತ್ರೆ, ಮಂಗಳೂರು ಏನಪೋಯ ಆಸ್ಪತ್ರೆ, ವಿರಾಜಪೇಟೆ ಕೊಡಗು ದಂತ ವೈದ್ಯ ಮಹಾವಿದ್ಯಾಲಯ ಮತ್ತು ವಿವಿಧ ಆಸ್ಪತ್ರೆಗಳ ಮತ್ತು ತಜ್ಞ ವೈದ್ಯರುಗಳ ಸಹಯೋಗದಲ್ಲಿ ‘ಆರೋಗ್ಯ ತಪಾಸಣಾ ಬೃಹತ್ ಶಿಬಿರ’, ದಂತ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವು ಸೆ.12 ರಂದು ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಕುಶಾಲನಗರದ ಇಂದಿರಾ ಬಡಾವಣೆಯ ಹಿಲಾಲ್ ಮದರಸ ಹಾಲ್ ಸಭಾಂಗಣದಲ್ಲಿ ನಡೆಯಲಿರುವ ಶಿಬಿರದಲ್ಲಿ ದಂತ ತಪಾಸಣೆ, ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಲಿದೆ.
ಅಲ್ಲದೆ ಮಂಗಳೂರಿನ ಏನಪೊಯ ಆಸ್ಪತ್ರೆಯ ತಜ್ಞವೈದ್ಯರುಗಳಿಂದ ಸ್ತನ ಪರೀಕ್ಷೆ ಹಾಗೂ ಗರ್ಭಕಂಠದ ಪರೀಕ್ಷೆಗಳನ್ನು ಕೂಡ ನಡೆಸಿ ಸೂಕ್ತ ಸಲಹೆಗಳನ್ನು ನೀಡಲಾಗುವುದು.
ಶಿಬಿರವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬೀಬಿ ಫಾತಿಮಾ ಚಾರಿಟೇಬಲ್ ಟ್ರಸ್ಟ್ ನ ಅಪ್ರೋಜ್ ಮಹಮ್ಮದ್ ಖಾನ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಪಾಲ್ಗೊಳ್ಳಲಿದ್ದಾರೆ.