ಮಡಿಕೇರಿ ಸೆ.8 : ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸೆ.10 ರಂದು ಚುನಾವಣೆ ನಡೆಯಲಿದ್ದು, ಸಮಾನ ಮನಸ್ಕರ ತಂಡಕ್ಕೆ ಮತದಾರರು ಬೆಂಬಲ ನೀಡಬೇಕೆಂದು ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇನು ಕೃಷಿಯ ಉತ್ತೇಜನ ಮತ್ತು ಕೃಷಿಕರ ಆರ್ಥಿಕ ಸಬಲತೆಗಾಗಿ ಜೇನು ಸಹಕಾರ ಸಂಘವನ್ನು ಹುಟ್ಟು ಹಾಕಲಾಗಿದೆ. ಇಲ್ಲಿನ ಜೇನಿಗೆ ಇಡೀ ವಿಶ್ವದಲ್ಲಿ ಬಹುದೊಡ್ಡ ಬೇಡಿಕೆ ಇದೆ. ಆದರೆ ಸರಿಯಾದ ಮಾರುಕಟ್ಟೆಯ ತಂತ್ರ, ನಿರ್ವಹಣೆಯ ಕೊರತೆ, ಭವಿಷ್ಯದ ಯೋಜನೆಗಳನ್ನು ಕೈಗೊಳ್ಳದೆ ಇರುವುದರಿಂದ ಜೇನು ಕೃಷಿಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಈ ಬಾರಿ ಜನರೇ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಬೆಂಬಲಿತ ಸಮಾನ ಮನಸ್ಕರ ತಂಡಕ್ಕೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಸಮಿತಿ ಸಂಚಾಲಕ ವೆಂಕಟೇಶ್ ಮಾತನಾಡಿ, ಹಿಂದಿನ ಆಡಳಿತ ಮಂಡಳಿಯಿಂದ ಕೊಡಗಿನ ಕೃಷಿಕರಿಗೆ ಲಾಭವಾಗಿಲ್ಲ. 500 ರಿಂದ 600 ರೂ. ಗೆ ಜೇನು ಮಾರಾಟವಾಗುತ್ತಿದೆ. ಬೇರೆಡೆ ಬ್ರ್ಯಾಂಡೆಡ್ ಜೇನಿಗೆ ಕಡಿಮೆ ಬೆಲೆ ಇರುವುದರಿಂದ ಇಲ್ಲಿನ ಜೇನು ಖರೀದಿಗೆ ಯಾರೂ ಮುಂದಾಗುತ್ತಿಲ್ಲ, ಸಂಘ ಅಭಿವೃದ್ಧಿ ಹೊಂದಿಲ್ಲ ಎಂದು ಟೀಕಿಸಿದರು.
ಈ ಬಾರಿ ಮತದಾರರು ಅಭಿವೃದ್ಧಿಗಾಗಿ ಮತ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ, ಡಿಸಿಸಿ ಸದಸ್ಯರಾದ ಸುನಿಲ್ ಪತ್ರವೊ ಹಾಗೂ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.









