ಮರಗೋಡು ಸೆ.8 : ಮರಗೋಡು ಹೊಸ್ಕೇರಿ ರಸ್ತೆಯಲ್ಲಿ ಮರಗೋಡು ಗ್ರಾಮ ಕೇಂದ್ರದಿಂದ ಸುಮಾರು 300 ಮೀಟರ್ ದೂರದಲ್ಲಿ ರಸ್ತೆ ಬದಿ ಬೃಹತ್ ಹೊಂಡವೊಂದು ಸೃಷ್ಟಿಯಾಗಿ ಅಪಾಯವನ್ನು ಆಹ್ವಾನಿಸುತ್ತಿದೆ. ಈ ಗುಂಡಿ ರಸ್ತೆಯ ತೀರಾ ಅಂಚಿನಲ್ಲೇ ಇರುವುದರಿಂದ ವಾಹನ ಸವಾರರ ಪಾಲಿಗೆ ಅಕ್ಷರಶಃ ಮರಣ ಗುಂಡಿಯಾಗಿದೆ. ಕೆಲದಿನಗಳ ಹಿಂದೆ ಕೆಎಸ್ಆರ್ಟಿಸಿ ಬಸ್ ನ ಚಕ್ರವೊಂದು ಗುಂಡಿಗೆ ಸಿಲುಕಿ ಪರದಾಡುವಂತಾಗಿತ್ತು. ಎದುರಿನಿಂದ ಬರುವ ವಾಹನಗಳಿಗೆ ದಾರಿ ನೀಡುವ ಯತ್ನದಲ್ಲಿ ಹಲವು ದ್ವಿಚಕ್ರ ವಾಹನಗಳು ಉರುಳಿ ಬಿದ್ದು ಸವಾರರು ಗಂಭೀರ ಗಾಯಗೊಂಡ ಪ್ರಕರಣಗಳು ನಡೆದಿವೆ. ಹಲವು ಕಾರುಗಳು ಕೂಡ ಗುಂಡಿಗೆ ಸಿಲುಕಿ ದಾರಿಹೋಕರು ಅವುಗಳನ್ಬು ತಳ್ಳಿರುವ ಪ್ರಸಂಗಗಳೂ ನಡೆದಿವೆ. ರಸ್ತೆಯ ಎರಡೂ ದಿಕ್ಕುಗಳು ಇಳಿಜಾರಿನಿಂದ ಕೂಡಿರುವುದರಿಂದ ವಾಹನಗಳು ವೇಗವಾಗಿ ಬಂದು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಈ ಗುಂಡಿಯನ್ನು ತಕ್ಷಣ ಮುಚ್ಚಿ ಮುಂದಾಗಬಹುದಾದ ಅನಾಹುತ ತಪ್ಪಿಸುವಂತೆ ಮರಗೋಡು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ.











