ಮಡಿಕೇರಿ ಸೆ.9 : ಸೈನಿಕರ ರಕ್ಷಣಾ ವಿಭಾಗ ಇಸಿಎಚ್‍ಎಸ್ ಮತ್ತು ಸಿಎಸ್‍ಡಿ ಕ್ಯಾಂಟಿನ್‍ಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭ ಮಾಜಿ ಸೈನಿಕರಿಗೆ ಅನ್ಯಾಯವಾಗುತ್ತಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸಿಎಚ್‍ಎಸ್ ಮತ್ತು ಸಿಎಸ್‍ಡಿಗಳಲ್ಲಿ ಮಾಜಿ ಸೈನಿಕರಿಗೆ ಶೇ.70 ರಷ್ಟು ಮೀಸಲಾತಿಯಿದೆ. ಆದರೆ, ಮಾಜಿ ಸೈನಿಕರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇತರರಿಗೆ ಹುದ್ದೆಯನ್ನು ನೀಡಲಾಗುತ್ತಿದ್ದು, ನಾಮಕಾವಸ್ಥೆಗೆ ಸಂದರ್ಶನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಇತರರಿಗೆ ಹುದ್ದೆ ನೀಡುವ ಮೂಲಕ ಮಾಜಿ ಸೈನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಮುಂದಿನ ಒಂದು ತಿಂಗಳೊಳಗೆ ಸರಿಪಡಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷ ಎಸ್.ಸುಧೀರ್ ಮಾತನಾಡಿ, ನಾವು ಯಾರ ವಿರುದ್ಧವು ಇಲ್ಲ, ಸರ್ಕಾರದ ವಿರುದ್ಧವು ಇಲ್ಲ. ನಮಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯ ಕೇಳುತ್ತಿದ್ದೇವೆ. ಕ್ಯಾಂಟಿನ್‍ನಲ್ಲಿ ಗುಮಾಸ್ತ ಹುದ್ದೆ ಮತ್ತು ಇಸಿಎಚ್‍ಎಸ್‍ನಲ್ಲಿ ಪರಿಚಾರಕ ಹುದ್ದೆಯಲ್ಲಿ ನಮಗೆ ಇರುವ ಅವಕಾಶವನ್ನು ನಮಗೆ ನೀಡಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಪಿ.ಎಸ್.ವಾಸು, ಸಂಚಾಲಕರಾದ ಪಿ.ಕೆ.ಕುಟ್ಟಪ್ಪ, ಸಿ.ಜಿ.ತಿಮ್ಮಯ್ಯ ಹಾಗೂ ಜಿಲ್ಲಾ ಮಹಿಳಾ ಸಂಚಾಲಕಿ ಭವಾನಿ ಉಪಸ್ಥಿತರಿದ್ದರು.









