ಸೋಮವಾರಪೇಟೆ ಸೆ.10 : ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಸ್ಥಾಪಕ ಅಧ್ಯಕ್ಷ, ಜಾಗ ದಾನಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಕೆ.ಕಾಳಪ್ಪ ಅವರ ಪುತ್ಥಳಿಯನ್ನು ಅವರ ಪುತ್ರ ಸಿ.ಕೆ.ರಾಘವ ಹಾಗೂ ಕುಟುಂಬಸ್ಥರು ಭಾನುವಾರ ಅನಾವರಣ ಮಾಡಿದರು.
ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗರ ಸಮುದಾಯಭವನದ ಪ್ರವೇಶ ದ್ವಾರದಲ್ಲಿ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಳಪ್ಪ ಅವರ ಕುಟುಂಬಸ್ಥರಾದ ಸುದೈವ, ರಾಗಿಣಿ, ಪದ್ಮಿನಿ, ಸವಿತಾ, ಕಿರಣ್ ಕುಶಾಲಪ್ಪ, ಲಲಿತ, ಮೇನಕ, ಅನ್ನಪೂರ್ಣ ಅವರುಗಳನ್ನು ಸನ್ಮಾನಿಸಲಾಯಿತು.
ಸಂಘದ ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಸಿ.ಕೆ.ಕಾಳಪ್ಪ ಅವರ ಸತತ ಪರಿಶ್ರಮದಿಂದ ತಾಲ್ಲೂಕು ಒಕ್ಕಲಿಗರ ಸಂಘ ಸ್ಥಾಪನೆಯಾಗಿದೆ. 1968ರಿಂದ 1995ರ ವರಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೋಟ್ಯಾಂತರ ಮೌಲ್ಯದ ಸ್ವಂತ ಜಾಗವನ್ನು ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ದಾನವಾಗಿ ನೀಡಿದ್ದಾರೆ. ಅವರ ಕನಸ್ಸಿನಂತೆ ವಿದ್ಯಾಸಂಸ್ಥೆಯನ್ನು ಕಟ್ಟಿದ್ದೇವೆ. ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಹತ್ತನೆ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಕಳೆದ 6ವರ್ಷಗಳಿಂದ ಸತತ ಶೇ.100ರಷ್ಟು ಫಲಿತಾಂಶ ಬರುತ್ತಿದೆ. ಪ್ರಸಕ್ತ ವರ್ಷದಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಪ್ರಾರಂಭವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶ ಈಡೇರಿತ್ತಿದೆ. ಶೇ.90 ರಷ್ಟು ರೈತರ ಮಕ್ಕಳು ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯೆ ಕಲಿಯುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಕೊಡಗು-ಮೈಸೂರು ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕಾಗಿದೆ. ಒಕ್ಕಲಿಗರ ಸಂಘದ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಅನುದಾನ ಕಲ್ಪಿಸಿದ್ದೇನೆ. ಗ್ರಂಥಾಲಯಕ್ಕೆ 25ಲಕ್ಷ ರೂ.ಗಳನ್ನು ನೀಡಲಾಗುವುದು. ಯುವ ಸಂಪತ್ತು ದೇಶದ ಸಂಪತ್ತಾಗಿದ್ದು, ರಾಜಕೀಯದಲ್ಲೂ ಯುವಕರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಚುನಾವಣಾ ಸಂದರ್ಭ ಮಾತ್ರ ರಾಜಕೀಯ ಮಾಡಬೇಕು. ನಂತರ ನಮ್ಮ ಜನಾಂಗದ ಏಳಿಗೆಗೆ ಒಂದೇ ವೇದಿಕೆಯಲ್ಲಿ ಕೆಲಸ ಮಾಡಬೇಕು. ನಾವು ಈಗ ಸಮಾಜಕ್ಕೆ ನಮ್ಮಿಂದ ಕೊಡುಗೆ ಸಿಕ್ಕಿದರೆ, ಅದು ಮುಂದಿನ ಪೀಳಿಗೆಗೆ ಒಳ್ಳೆಯದಾಗಲಿದೆ. ನಮ್ಮ ಜನಾಂಗ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಮಕ್ಕಳ ಉನ್ನತ ಶಿಕ್ಷಣಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ ಸಿಗಬೇಕು. ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯಗಳು ಸಿಗುವಂತೆ ನೋಡಿ ಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ತಾಕೇರಿ ಗ್ರಾಮದ ಅನುಜ, ಯಡೂರು ಗ್ರಾಮದ ವೈ.ಎಸ್.ಧನ್ಯ, ಡಿ.ಸಿ.ತಿಲಕ್, ಚೌಡ್ಲು ಗ್ರಾಮದ ಕೆ.ಜೆ.ನಿಧಿ, ಕೂತಿ ಗ್ರಾಮದ ಎಚ್.ಎಸ್.ನಿತಿನ್, ಪಿಯುಸಿ ಯಲ್ಲಿ ತಲ್ತಾರೆಶೆಟ್ಟಳ್ಳಿಯ ಕೆ.ಎ.ಅನನ್ಯ, ಚೌಡ್ಲು ಗ್ರಾಮದ ಬಿ.ಜಿ.ಸೌರಭ, ನೆಲ್ಲಿಹುದಿಕೇರಿ ಗ್ರಾಮದ ಟಿ.ಎಸ್.ವಿನಂತಿ, ಬೆಳೂರು ಬಸನಳ್ಳಿ ಹಂಸಿನಿ, ಚಿಕ್ಕತೋಳೂರು ಜ್ಞಾನವ್‌ರಾಜ್ ಅವರನ್ನು ಸನ್ಮಾನಿಸಿ, ಪ್ರೋತ್ಸಾಹ ದನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಎನ್.ಬಿ.ಗಣಪತಿ, ಶಾಲಾ ಭಾತ್ಮೀದಾರ ಕೆ.ಎಂ.ಜಗದೀಶ್, ಖಜಾಂಚಿ ಜಿ.ಪಿ.ಲಿಂಗರಾಜು, ಆಡಳಿತ ಮಂಡಳಿ ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್ ಮತ್ತಿತರು ಇದ್ದರು.











