ನಾಪೋಕ್ಲು sಸೆ.11 : ಕ್ರೈಸ್ತರ ಪವಿತ್ರ ಹಬ್ಬವಾದ ಕನ್ಯಾ ಮರಿಯಮ್ಮ ಜನ್ಮದಿನವನ್ನು ನಾಪೋಕ್ಲುವಿನ ಮೇರಿ ಮಾತೆ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಮಾತೆ ಮರಿಯಮ್ಮ ಜಯಂತಿಯ ಪ್ರಯುಕ್ತ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ದಿನದ ಮಹತ್ವದ ಬಗ್ಗೆ ವಿವರಿಸಿದರು.
ಮೇರಿಮಾತೆಯ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂತೃಪ್ತ ಜೀವನ ನಡೆಸಬೇಕೆಂದು ಹಿತವಚನ ನುಡಿದು ಎಲ್ಲರಿಗೂ ಶುಭ ಹಾರೈಸಿದರು.
ಕ್ರೈಸ್ತ ಬಾಂಧವರು ದೇವಾಲಯದಲ್ಲಿ ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸಿ ತಾವು ತಂದ ಹೂಗಳನ್ನು ದೇವಾಲಯದ ಆವರಣದಲ್ಲಿ ವಿಶೇಷವಾಗಿ ಅಲಂಕರಿಸಿ ಇರಿಸಲಾದ ಮರಿಯಮ್ಮ ನವರ ಪ್ರತಿರೂಪಕ್ಕೆ ಸಮರ್ಪಿಸಿ ಸಂಭ್ರಮಿಸಿ ಧನ್ಯತಭಾವ ಹೊಂದಿದರು.
ಹಬ್ಬಕ್ಕೆ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೋವೇನಾ ಪ್ರಾರ್ಥನೆ ಆಯೋಜಿಸಲಾಗಿತ್ತು. ಈ ಸಂದರ್ಭ ಮೇರಿ ಮಾತೆ ದೇವಾಲಯದ ವ್ಯಾಪ್ತಿಯ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಹಬ್ಬವನ್ನು ಆಚರಿಸಿದರು.
ವರದಿ : ದುಗ್ಗಳ ಸದಾನಂದ