ಮಡಿಕೇರಿ ಸೆ.11 : ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವನ್ನು ಉಪಮುಖ್ಯ ವೈದ್ಯಾಧಿಕಾರಿ ಹೆಚ್.ವಿ.ದೇವದಾಸ್ ಉದ್ಘಾಟಿಸಿ, ಮಾತನಾಡಿ ಅಂಬೇಡ್ಕರ್ ಅವರಿಂದ ಎಲ್ಲವನ್ನೂ ಪಡೆದುಕೊಂಡ ನಾವು ಸಮಾಜದ ದೀನದಲಿತರ ಬದುಕನ್ನು ಹಸನಾಗಿಸಲು ಶ್ರಮಪಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ದಲಿತ ಸಂಘರ್ಷ ಸಮಿತಿಯು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು, ಆಶ್ರಮದ ಹಿರಿಯರಿಗೆ ಒಂದು ದಿನ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಿದಲ್ಲಿ ತಾನೂ ಕೂಡ ಒಬ್ಬ ವೈದ್ಯನಾಗಿ ಬಂದು ಅವರ ಸೇವೆ ಮಾಡುವುದಾಗಿ ಭರವಸೆ ನೀಡಿದರು.
ಕೊಡಗು ಮೆಡಿಕಲ್ ಕಾಲೇಜಿನ ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ದೇಶದ ಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಎಲ್.ದಿವಾಕರ್, ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಬಗ್ಗೆ ತಿಳಿದುಕೊಳ್ಳಬೇಕೆಂದರು.
ಡಿಎಸ್‍ಎಸ್ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ವೇದಿಕೆಯಲ್ಲಿ ದಸಂಸ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಸಂಘಟನಾ ಸಂಚಾಲಕ ಲೋಕನಾಥ್, ನಗರ ಸಂಘಟನಾ ಸಂಚಾಲ ಸಿ.ಪಿ.ಸಿದ್ದೇಶ್ವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಸ್ವೆಟರ್ ಹಾಗೂ ಸ್ತ್ರೀ ಶಕ್ತಿ ವೃದ್ಧಾಶ್ರಮದ ಹಿರಿಯರಿಗೆ ವಸ್ತ್ರ ವಿತರಿಸಲಾಯಿತು. ಅಲ್ಲದೇ ಶಾಸಕ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.










