ಮಡಿಕೇರಿ ಸೆ.12 : ಕಾಫಿ ತೋಟದ ಲೈನ್‍ಮನೆಗಳಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿರುವ ನಿವೇಶನ ಹಾಗೂ ವಸತಿ ರಹಿತ ಬುಡಕಟ್ಟು ಕುಟುಂಬದವರಿಗೆ ನಿವೇಶನ ಹಾಗೂ ಹಕ್ಕುಪತ್ರ ಒದಗಿಸವಂತೆ ಒತ್ತಾಯಿಸಿ ಬುಡಕಟ್ಟು ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿತು.
ಪೊನ್ನಂಪೇಟೆ ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, 8 ತಿಂಗಳುಗಳ ಕಾಲ ನಿರಂತರವಾಗಿ ತಾಲೂಕು ಕಚೇರಿಯ ಮುಂದೆ ಅಹೋರಾತ್ರಿ ಪ್ರತಿಭಟನೆ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿ ಇಂದಿಗೆ 5 ತಿಂಗಳು ಕಳೆದರು ನಮ್ಮ ಸಮಸ್ಯೆಗಳಿಗೆ ಪರಿಹಾರ ಲಭಿಸಿಲ್ಲ. ಒಂದು ತಿಂಗಳೊಳಗೆ ನಿವೇಶನ ರಹಿತ ಆದಿವಾಸಿಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ನೀಡುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದರು.
ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ.ಗಪ್ಪು ಮುಂದಾಳತ್ವದಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿಯ ಮುಂದೆ ಜಮಾವಣೆಗೊಂಡ ನೂರಾರು ಗಿರಿಜನರು, ತಾಲೂಕು ತಶೀಲ್ದಾರ್‍ಗಳಿಗೆ ಮನವಿ ಸಲ್ಲಿಸಿ ನಂತರ ಪೊನ್ನಂಪೇಟೆಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ತಾಲೂಕು ಪಂಚಾಯಿತಿಯ ಕಚೇರಿಗೆ ಆಗಮಿಸಿ ಅಲ್ಲಿನ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಾಗೂ ಗಿರಿಜರ ಕಲ್ಯಾಣಾಭಿವೃದ್ಧಿಯ ಅಧಿಕಾರಿಗಳಿಗೆ ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿ ಕ್ರಮಕ್ಕೆ ಒಂದು ತಿಂಗಳ ಗಡುವು ನೀಡಿದರು.
ಹೋರಾಟಗಾರ್ತಿ ಜ್ಯೋತಿ, ಬುಡಕಟ್ಟು ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಪಿ.ಸಿ.ಬೋಜ, ಪಿ.ಟಿ.ಜ್ಯೋತಿ, ಜೆ.ಸಿ.ಲಲಿತ, ಜೆ.ಎಸ್.ಚಿನ್ನಮ್ಮ, ಕೊಟ್ಟ, ಗಂಗೆ ಸೇರಿದಂತೆ ಪ್ರಮುಖರು ಹಾಜರಿದ್ದರು.
ತಾಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕಿ ಸ್ವರೂಪ, ನರೇಗಾ ಸಹಾಯಕ ನಿರ್ದೇಶಕ ಪಿ.ವಿ.ಶ್ರೀನಿವಾಸ್, ವಸತಿ ಯೋಜನೆಯ ನೋಡಲ್ ಅಧಿಕಾರಿ ಅಸ್ಲಾಮ್ ಪಾಷ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.
ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್, ಪೊನ್ನಂಪೇಟೆ ಠಾಣಾಧಿಕಾರಿ ಜಿ.ನವೀನ್ ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದರು.
ನಿವೇಶನ ಹಂಚಿಕೆಗೆ ಕ್ರಮ : ಮನವಿ ಪತ್ರ ಸ್ವೀಕರಿಸಿ ಐಟಿಡಿಪಿ ಇಲಾಖೆಯ ವ್ಯವಸ್ಥಾಪಕ ಕೀರ್ತಿಕುಮಾರ್ ಮಾತನಾಡಿ, ಮಂಜೂರು ಆಗಿರುವ ಜಾಗದಲ್ಲಿ ಗಿರಿಜನರಿಗೆ ನಿವೇಶ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಡಾವಣೆ ನಕ್ಷೆಯು ಅಂತಿಮ ಹಂತದಲ್ಲಿದೆ. ಇಲ್ಲಿಗೆ ಬೇಕಾದ ವಿದ್ಯುತ್, ರಸ್ತೆ ಹಾಗೂ ನೀರಿನ ವ್ಯವಸ್ಥೆಯು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸವು ಪ್ರಗತಿಯಲ್ಲಿದೆ. ಇನ್ನು 3 ತಿಂಗಳೊಳಗೆ ನಿವೇಶನ ರಹಿತ ಗಿರಿಜನರಿಗೆ ಆದ್ಯತೆ ಮೇರೆ ನಿವೇಶನ ಮಂಜೂರು ಮಾಡುವ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಇನ್ನಷ್ಟು ಸಮಯಾವಕಾಶ ಬೇಕಾಗಿದೆ. ಪ್ರತಿಭಟನಾಕಾರರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.








