ಕುಶಾಲನಗರ/ ಕೂಡಿಗೆ ಸೆ.12 : ಶಾಲಾ ಮಕ್ಕಳಲ್ಲಿ ಗುಪ್ತವಾಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಿರುವ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಗಳು ಮಕ್ಕಳಲ್ಲಿ ಮನೋವಿಕಾಸ ಬೆಳವಣಿಗೆಯೊಂದಿಗೆ ಸ್ಪರ್ಧಾ ಮನೋಭಾವ ಬೆಳವಣಿಗೆಗೆ ಉತ್ತಮ ವೇದಿಕೆ ಒದಗಿಸುತ್ತವೆ ಎಂದು ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಹೇಳಿದರು.
ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಕ್ಲಸ್ಟರ್ ಕೇಂದ್ರದ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲಾ ಶಿಕ್ಷಕರ ಬಳಗದ ಸಹಯೋಗದೊಂದಿಗೆ ಕೂಡಿಗೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕೂಡಿಗೆ ಕ್ಲಸ್ಟರ್ ಮಟ್ಟದ 2023-24 ನೇ ಸಾಲಿನ
ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ಇಂತಹ ಸ್ಪರ್ಧಾ ಕಾರ್ಯಕ್ರಮವು ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಯಾಗಿದ್ದು, ಇವು ಪಠ್ಯದ ಜತೆಗೆ ಮಕ್ಕಳ ಪ್ರತಿಭಾ ಅನ್ವೇಷಣೆಗೆ ಅವಶ್ಯಕವಾಗಿದೆ ಎಂದರು.
ಶಿಕ್ಷಣ ಇಲಾಖೆಯೊಂದಿಗೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲಾ ಶಿಕ್ಷಕರ ಬಳಗದ ಶಿಕ್ಷಕರು ಜತೆಗೂಡಿ ಆರ್ಥಿಕ ನೆರವಿನೊಂದಿಗೆ ಈ ಸ್ಪರ್ಧೆಯನ್ನು ಉತ್ತಮವಾಗಿ ಸಂಘಟಿಸಿರುವುದು ಶ್ಲಾಘನೀಯವಾದುದು ಎಂದು ಭಾಸ್ಕರ್ ನಾಯಕ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ ಸದಸ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಜೆ.ಫಿಲೋಮಿನಾ ಮಾತನಾಡಿ, ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವ ಇಂತಹ ಸ್ಪರ್ಧೆಗಳಿಗೆ ನಾವೆಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಇದರಿಂದ ಮಕ್ಕಳ ಪ್ರತಿಭೆಯನ್ನು ಹೊರತರಲು ಸಾಧ್ಯ ಎಂದರು.
ಸ್ಪರ್ಧೆಯು ನಾಡಿನ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಯಾಗಿದ್ದು, ಮಕ್ಕಳಿಗೆ ಪಠ್ಯದ ಜತೆಗೆ ಕಲೆ, ಸಂಸ್ಕೃತಿಯ ಕಲಿಕೆಗೆ ಸಹಕಾರಿಯಾಗಿದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ , ಎರಡು ದಶಕಗಳ ಹಿಂದೆ ಆರಂಭಗೊಂಡ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತವೆ ಎಂದರು.
ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಮದಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಕೆ.ಗಾಯತ್ರಿ ಮಾಹಿತಿ ನೀಡಿದರು.
ಸಿ.ಆರ್.ಪಿ.ಕೆ.ಶಾಂತಕುಮಾರ್, ಸ್ಪರ್ಧೆಗಳ ವಿವರ ನೀಡಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್, ಗ್ರಾ.ಪಂ.ಸದಸ್ಯ ಚಂದ್ರು ಮೂಡ್ಲಿಗೌಡ,
ಶಿಕ್ಷಣ ಸಂಯೋಜಕ ಕೆ.ಬಿ.ರಾಧಾಕೃಷ್ಣ, ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್, ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸಿ.ದುರ್ಗೇಶ್, ಜಿಲ್ಲಾ ಗೈಡ್ಸ್ ಸಂಸ್ಥೆಯ ಕ್ಯಾಪ್ಟನ್ ಸಿ.ಎಂ.ಸುಲೋಚನಾ, ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರಾದ ತಮ್ಮಯ್ಯ, ಸಣ್ಣಕ್ಕ, ರಾಮೇಗೌಡ, ಕೆ.ಡಿ.ನವೀನ, ಎಚ್.ಎಸ್.ಸುಜಾತ, ರೇಣುಕ, ಗೋವಿಂದರಾಜು, ತಾರಾಮಣಿ,ಶಶಿಕಲಾ ಇತರರು ಇದ್ದರು. ಶಿಕ್ಷಕಿ ಬಿ.ಟಿ.ಕುಸುಮ ನಿರ್ವಹಿಸಿದರು.
ಇದೇ ವೇಳೆ ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಅವರನ್ನು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.
ಮಕ್ಕಳ ಪ್ರತಿಭೆ ಅನಾವರಣ: ಮಕ್ಕಳ ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ವಿದ್ಯಾರ್ಥಿಗಳು ವಿವಿಧ ಕಲೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮಕ್ಕಳಿಗೆ ಹಾಡು, ನೃತ್ಯ, ಛದ್ಮವೇಷ, ಭಾಷಣ, ಆಶು ಭಾಷಣ, ಧಾರ್ಮಿಕ ಪಠಣ, ಜಾನಪದ ನೃತ್ಯ, ರಂಗೋಲಿ, ಚಿತ್ರಕಲೆ, ಕಥೆ ಹೇಳುವುದು, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಮಣ್ಣಿನ ಮಾದರಿ ತಯಾರಿಕೆ, ಮುಂತಾದ ಸ್ಪರ್ಧೆಗಳು ಪ್ರೇಕ್ಷಕರ ಗಮನ ಸೆಳೆದವು.










