ಮಡಿಕೇರಿ ಸೆ.12 : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.
ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ದಸರಾ ಸಮಿತಿ ಅಧ್ಯಕ್ಷೆ, ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದಸರಾ ಉತ್ಸವಕ್ಕೆ ಮೆರುಗು ನೀಡುವ ದಶಮಂಟಪಗಳ ವೈಭವದ ಹಿಂದೆ ಇರುವ ಮಂಟಪ ಸಮಿತಿಗಳ ಶ್ರಮವನ್ನು ತಾನು ಹತ್ತಿತರದಿಂದ ಕಂಡಿದ್ದೇನೆ. ಅಲ್ಲದೇ ಉತ್ಸವದ ಯಶಸ್ಸಿಗಾಗಿ ಉಪ ಸಮಿತಿಗಳ ಪರಿಶ್ರಮ ಅರಿವು ಕೂಡ ತನಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ಸೂಕ್ತ ಅನುದಾನ ಒದಗಿಸಲು ಶ್ರಮಿಸುತ್ತೇನೆ ಎಂದು ಶಾಸಕರು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಅಧ್ಯಕ್ಷೆ ಅನಿತಾ ಪೂವಯ್ಯ, ದಸರಾ ಸಮಿತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 3 ಕೋಟಿ ಅನುದಾನ ಬೇಡಿಕೆ ಮುಂದಿಡಲಾಗಿದೆ. ಈ ಬಾರಿ ದಸರಾ ಉತ್ಸವವನ್ನು ವಿಜ್ರಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ದಸರಾ ಸಮಿತಿ ಆಹ್ವಾನಿತರುಗಳಾದ ಟಿ.ಪಿ.ರಮೇಶ್, ಎಂ.ಬಿ.ದೇವಯ್ಯ, ಜಿ.ರಾಜೇಂದ್ರ, ಸತೀಶ್ ಪೈ, ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಮಾಜಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್, ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಮನು ಮಂಜುನಾಥ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಆಯುಕ್ತ ವಿಜಯ ಹಾಜರಿದ್ದರು. ಶ್ವೇತಾ ಪ್ರಶಾಂತ್ ಲೆಕ್ಕ ಪತ್ರ ಮಂಡಿಸಿದರು. ಸಂಧ್ಯಾ ಅಶೋಕ್ ಪ್ರಾರ್ಥಿಸಿದರು. ರಾಜೇಶ್ ಯಲ್ಲಪ್ಪ ನಿರೂಪಿಸಿದರು. ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಸ್ವಾಗತಿಸಿದರು.
ಉಪಸಮಿತಿಗೆ ಆಯ್ಕೆ :: ಮಡಿಕೇರಿ ದಸರಾ ಉತ್ಸಾವದ ಉಪಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ನಡೆಯಿತು.
ಸಾಂಸ್ಕೃತಿಕ ಸಮಿತಿಗೆ 9 ಮಂದಿ ಆಕಾಂಕ್ಷಿಗಳಿದ್ದರು. ಈ ಪೈಕಿ 7 ಮಂದಿ ಸ್ಪರ್ಧೆಯಿಂದ ಹಿಂದೆ ಸರಿದರು.
ಅಧ್ಯಕ್ಷರಾಗಿ ಅನಿಲ್ ಹೆಚ್.ಟಿ., ಸಂಚಾಲಕರಾಗಿ ತೆನ್ನೀರಾ ಮೈನಾ ಆಯ್ಕೆಯಾದರು.
ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಪ್ರದೀಪ್, ಕವಿಗೋಷ್ಠಿ ಸಮಿತಿ ಅಧ್ಯಕ್ಷರಾಗಿ ಉಜ್ವಲ್ ರಂಜಿತ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾನೆಹಿತ್ಲು ಮೊಣ್ಣಪ್ಪ, ವೇದಿಕೆ ಸಮಿತಿ ಅಧ್ಯಕ್ಷರಾಗಿ ಕನ್ನಂಡ ಕವಿತಾ, ಅಲಂಕಾರ ಸಮಿತಿ ಅಧ್ಯಕ್ಷರಾಗಿ ಮುನೀರ್ ಆಯ್ಕೆಯಾದರು.
ಕಾರ್ಯಾಧ್ಯಕ್ಷರ ಘೋಷಣೆ :: ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಶಮಂಟಪ ಸಮಿತಿಯಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಪ್ರಕಾಶ್ ಆಚಾರ್ಯ ಅವರನ್ನು ಅಧಿಕೃತವಾಗಿ ಕಾರ್ಯಾಧ್ಯಕ್ಷರಾಗಿ ಸಭೆಯಲ್ಲಿ ಘೋಷಿಸಲಾಯಿತು.
ಉಪಾಧ್ಯಕ್ಷರಾಗಿ ಸಾರ್ವಜನಿಕ ಕ್ಷೇತ್ರದಿಂದ ನೆರವಂಡ ಜೀವನ್ ಆಯ್ಕೆಯಾದರು. ಖಜಾಂಚಿಯಾಗಿ ಅರುಣ್ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಲೋಕೇಶ್ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಗರಸಭಾ ಸದಸ್ಯರುಗಳಾದ ಅಪ್ಪಣ್ಣ, ಅರುಣ್ ಶೆಟ್ಟಿ, ರಾಜೇಶ್ ಯಲ್ಲಪ್ಪ ಆಕಾಂಕ್ಷಿಗಳಾಗಿದ್ದರು. ರಾಜೇಶ್ ಯಲ್ಲಪ್ಪ ಅವರಿಗೆ ಬೆಂಬಲ ಸೂಚಿಸಿ ಅರುಣ್ ಶೆಟ್ಟಿ ಸ್ಪರ್ಧೆಯಿಂದ ಹಿಂದೆ ಸರಿದರು.
ನಂತರ ಅಪ್ಪಣ್ಣ, ರಾಜೇಶ್ ಯಲ್ಲಪ್ಪ ನಡುವೆ ನಡೆದ ಪೈಪೋಟಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಯಲ್ಲಪ್ಪ ಆಯ್ಕೆಯಾದರು.