ಮಡಿಕೇರಿ ಸೆ.12 : ರಾಜ್ಯ ಸರ್ಕಾರ ಕೊಡಗು ವಿಶ್ವವಿದ್ಯಾನಿಲಯ ಸೇರಿದಂತೆ ನೂತನ ಎಂಟು ವಿವಿಗಳನ್ನು ರದ್ದುಗೊಳಿಸುವ ಚಿಂತನೆ ಮಾಡಿದೆ ಎಂದು ಆರೋಪಿಸಿ ಮತ್ತು ಬಿಜೆಪಿ ಸರ್ಕಾರದ ಅವಧಿಯ ರೈತ ನೀತಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.
ಗಣಪತಿ ದೇವಾಲಯ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪ್ರಸಕ್ತ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತಪರವಾಗಿ ಜಾರಿಗೆ ತಂದಿದ್ದ ರೈತ ಸನ್ಮಾನ ನಿಧಿ, ರೈತ ವಿದ್ಯಾರ್ಥಿಗಳ ವಿದ್ಯಾನಿಧಿ ಸೇರಿದಂತೆ ಕೃಷಿ ಕಾಯಿದೆ ಮತ್ತಿತರ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸುತ್ತಿದ್ದು, ರೈತಾಪಿ ವರ್ಗಕ್ಕೆ ಕಷ್ಟ ಎದುರಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಆರೋಪಿಸಿದರು.
ಕೊಡಗು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ನೂತನ ಎಂಟು ವಿಶ್ವವಿದ್ಯಾನಿಲಯಗಳನ್ನು ರದ್ದುಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸಿರುವುದು ಸರಿಯಲ್ಲ, ಈ ಪ್ರಸ್ತಾಪವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಪ್ರಮುಖರಾದ ಎಂ.ಎನ್.ಕುಮಾರಪ್ಪ, ಜಿ.ಎಲ್.ನಾಗರಾಜ್, ಎಂ.ವಿ.ನಾರಾಯಣ್, ಕೆಜಿ ಮನು, ಎಂ.ಡಿ.ಕೃಷ್ಣಪ್ಪ, ಉಮಾಶಂಕರ್, ಗೌತಮ್, ಜಯವರ್ಧನ್, ಬೋಸ್ ಮೊಣ್ಣಪ್ಪ, ರೂಪ ಉಮಾ ಶಂಕರ್, ವೇದಾವತಿ, ರುಕ್ಮಿಣಿ, ಶೋಭಾ ಪ್ರಕಾಶ್, ಪ್ರವೀಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








