ಮಡಿಕೇರಿ ಸೆ.12 : ಹೊಸ್ಕೇರಿ ಗ್ರಾಮ ವ್ಯಾಪ್ತಿಯಲ್ಲಿರುವ ದೇವರಕಾಡಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪಿಸಲು ಚೆಸ್ಕಾಂ ಯೋಜನೆ ರೂಪಿಸಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ಹೊಸ್ಕೇರಿ ಮತ್ತು ಮರಗೋಡು ಗ್ರಾಮಸ್ಥರು ಯೋಜನೆಯನ್ನು ವಿರೋಧಿಸಿ ಶಾಸಕರುಗಳು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಚೆಸ್ಕಾಂ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ ಸೂಕ್ತ ಉತ್ತರ ದೊರೆಯದೆ ಇರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ ಎಂದು ಗಮನ ಸೆಳೆದಿದ್ದಾರೆ.
ತಲೆತಲಾಂತರಗಳಿಂದ ಗ್ರಾಮಸ್ಥರು ಪ್ರಕೃತಿಯನ್ನೇ ದೇವರೆಂದು ಭಾವಿಸಿ ಇಲ್ಲಿನ ಅರಣ್ಯವನ್ನು ನಾಶ ಮಾಡದೆ ಉಳಿಸಿಕೊಂಡು ಬಂದಿದ್ದಾರೆ. ಗ್ರಾಮ ದೇವತೆಗಳಾದ ಶ್ರೀಚಾಮುಂಡೇಶ್ವರಿ, ಶ್ರೀಅಯ್ಯಪ್ಪ ದೇವರು ಹಾಗೂ ನಾಗದೇವರ ಸಾನಿಧ್ಯ ಇಲ್ಲಿದೆ. ಸಬ್ ಸ್ಟೇಷನ್ ಯೋಜನೆ ಅನುಷ್ಠಾನದಿಂದ ದೇವರಕಾಡು ನಾಶವಾಗುವುದಲ್ಲದೆ ಪರಿಸರ ಮಾಲಿನ್ಯವಾಗಲಿದೆ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇವರಕಾಡು ಮತ್ತು ಗ್ರಾಮಸ್ಥರ ಪರವಾಗಿ ಕೊಡಗು ರಕ್ಷಣಾ ವೇದಿಕೆ ಹೋರಾಟ ನಡೆಸಲಿದ್ದು, ಯಾವುದೇ ಕಾರಣಕ್ಕೂ ಸಬ್ ಸ್ಟೇಷನ್ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಸ್ಥಳೀಯರ ವಿರೋಧದ ನಡುವೆಯೂ ಯೋಜನೆಗೆ ಚಾಲನೆ ನೀಡಿದರೆ ಸಂಬಂಧಿಸಿದ ಇಲಾಖೆಗಳಿಗೆ ಗ್ರಾಮಸ್ಥರೊಂದಿಗೆ ಮುತ್ತಿಗೆ ಹಾಕುವುದಾಗಿ ಪವನ್ ಪೆಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.










