ಬೆಂಗಳೂರು ಸೆ.14: ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿ ಚುರುಕುಗೊಳಿಸುವಂತೆ ಹಾಗೂ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ವ್ಯಾಪ್ತಿಯ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಕಾಸಸೌಧದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರೊಂದಿಗೆ ಸಭೆಯನ್ನು ನಡೆಸಿ ಮಾಹಿತಿ ಪಡೆದುಕೊಂಡರು.
ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಹಾಗೂ ಪುಣ್ಯಕ್ಷೇತ್ರವಾದ ಭಾಗಮಂಡಲಕ್ಕೆ ಪ್ರತಿವರ್ಷ ಮಳೆಗಾಲದಲ್ಲಿ 2-3 ತಿಂಗಳ ಕಾಲ ರಸ್ತೆ ಸಂಪರ್ಕ ಕಡಿತಗೊಂಡು ಸಮಸ್ಯೆ ಎದುರಿಸುತ್ತಿದ್ದ ಹಿನ್ನಲೆಯಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಯಿತು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಈ ವರ್ಷದ ಮಳೆಗಾಲದಲ್ಲೂ ಜನರಿಗೆ ಸಂಚಾರಕ್ಕೆ ಅವಕಾಶ ದೊರೆತಿರಲಿಲ್ಲ. ಈ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ಬಾರಿ ಜಿಲ್ಲಾ ಪ್ರವಾಸದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ಹಾರಂಗಿ ಜಲಾಶಯದ ವ್ಯಾಪ್ತಿ ಕಾಲುವೆಗಳಲ್ಲಿ ಸಮರ್ಪಕವಾಗಿ ನೀರು ಹರಿಸುವ ಮೂಲಕ ಆ ಭಾಗದ ರೈತರುಗಳಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ನೀರಾವರಿ ದಕ್ಷಿಣ ವಲಯದ ಮುಖ್ಯ ಇಂಜಿನೀರ್ ಗೆ ನಿರಂತರ ನಿಗಾ ವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಕಾವೇರಿ ನೀರಾವರಿ ಅಭಿವೃದ್ದಿ ನಿಗಮ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮುಖ್ಯ ಇಂಜಿನಿಯರ್ ನೀರಾವರಿ ದಕ್ಷಿಣ ವಲಯ ಮೈಸೂರು ವೆಂಕಟೇಶ್ ಉಪಸ್ಥಿತರಿದ್ದರು.