ಮಡಿಕೇರಿ ಸೆ.14 : ತಿರುಪತಿಯಿಂದ ತಿರುಮಲಕ್ಕೆ ಹೋಗುವ ಪಾದಾಚಾರಿ ಮಾರ್ಗದ ಎರಡೂ ಬದಿಗಳಲ್ಲಿ ಕಬ್ಬಿಣದ ಬೇಲಿಗಳನ್ನು ನಿರ್ಮಿಸಿ ಭಕ್ತರ ಹಾಗೂ ಪ್ರಾಣಿಗಳ ರಕ್ಷಣೆಗೆ ಟಿಟಿಡಿ ಮುಂದಾಗಬೇಕು ಎಂದು ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಿರುಮಲಕ್ಕೆ ಹೋಗುವ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಪ್ರಾಣಿಗಳಿವೆ. ಭಕ್ತರು ಅಲ್ಲಿರುವ ಜಿಂಕೆ ಮತ್ತಿತರ ಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನು ನೀಡುತ್ತಿದ್ದು, ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕರಡಿ, ಚಿರತೆ ಸೇರಿದಂತೆ ಕೆಲವು ಪ್ರಾಣಿಗಳಿಂದ ಭಕ್ತರಿಗೆ ಅಪಾಯವಿದೆ. ಇತ್ತೀಚೆಗೆ ಚಿರತೆ ದಾಳಿಯಿಂದ ಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ನಿಯೋಗ ತಿರುಪತಿ ತಿರುಮಲ ಮಾರ್ಗದ ಇಕ್ಕೆಲಗಳನ್ನು ಖುದ್ದು ಪರಿಶೀಲಿಸಿ ಈ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದ್ದಾರೆ.
ತಿರುಮಲ ಪಾದಾಚಾರಿ ಮಾರ್ಗದ ಎರಡೂ ಬದಿಗಳಲ್ಲಿ ಕಬ್ಬಿಣದ ಬೇಲಿಗಳನ್ನು ಅಳವಡಿಸುವ ಮೂಲಕ ಭಕ್ತರು ಹಾಗೂ ವನ್ಯಜೀವಿಗಳನ್ನು ರಕ್ಷಿಸಬೇಕೆಂದು ಟಿಟಿಡಿ ಸಮಿತಿಗೆ ಮನವಿ ನೀಡಲಾಗಿದೆ. ಭಕ್ತರು ಯಾವುದೇ ಆತಂಕವಿಲ್ಲದೆ ನಿರ್ಭೀತಿಯಿಂದ ದೇವಾಲಯಗಳಿಗೆ ತೆರಳುವಂತ್ತಾಗಬೇಕು. ಮುಂದಿನ ದಿನಗಳಲ್ಲಿ ಚಿರತೆ ದಾಳಿಯಂತಹ ಘಟನೆಗಳು ಮರುಕಳಿಸದಂತೆ ತಿರುಪತಿ ತಿರುಮಲ ದೇವಾಲಯ ಸಮಿತಿ ಕೂಡ ಎಚ್ಚರ ವಹಿಸಬೇಕು ಎಂದು ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.









