ಸಿದ್ದಾಪುರ ಸೆ.14 : ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಕಲಾ ಸಾಹಿತ್ಯ ಅಭಿಮಾನದಿಂದ ತಮ್ಮದೇಯಾದ ಪ್ರತಿಭೆ ಅನಾವರಣಗೊಳಿಸುವ ಮೂಲಕ ಪ್ರತಿಭಾನ್ವಿತರಾಗಿ ಸಮಾಜದಲ್ಲಿ ಗುರುತಿಸಿಕೊಂಡು ಮುನ್ನಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಇಕ್ರಾ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಚಟ್ಟಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಸಾಮಾಜಿಕ ಜಾಲತಾಣ ಹಾಗೂ ದುಷ್ಟಗಳಿಂದ ದೂರವಿದ್ದು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವ ಮೂಲಕ
ಉತ್ತಮ ಭವಿಷ್ಯ ರೂಪಿಸಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಲು ಸಹಕಾರ ನೀಡಬೇಕೆಂದು ಹೇಳಿದ ಅವರು ವಿದ್ಯಾರ್ಥಿಗಳಿಗೆ ಇಲಾಖೆಯ ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿದರು.
ಚಟ್ಟಳ್ಳಿ ಕ್ಲಸ್ಟರ್ ಮಟ್ಟದ ಸಿ ಆರ್ ಪಿ ಅಶೋಕ್ ಮಾತನಾಡಿ ಒಂದರಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಅಂತ ಕಾರ್ಯಕ್ರಮಗಳನ್ನ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದು
ಕ್ಲಸ್ಟರ್ ಮಟ್ಟದ ಸುಮಾರು 15 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರೆ.
ಕ್ಲಸ್ಟರ್ ಮಟ್ಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತಿದ್ದು
ಪ್ರತಿಭೆಯ ಮೂಲಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನ ತಾಲೂಕು, ಜಿಲ್ಲಾ, ರಾಜ್ಯಮಟ್ಟಕ್ಕೆ ಗುರುತಿಸಲಾಗುತ್ತಿದೆ.
ಶಾಲೆಯ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ ಪ್ರತಿಭಾ ಕಾರಂಜಿ ಕಾರ್ಯಕ್ರಮನ ಯಶಸ್ಸಿಗೊಳಿಸಲು
ಇಕ್ರಾ ಶಾಲೆ ಆಡಳಿತ ಮಂಡಳಿ ಇಲಾಖೆಯೊಂದಿಗೆ ಕೈ ಜೋಡಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .
ಪ್ರತಿಭಾ ಕಾರಂಜಿಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳ ಛದ್ಮವೇಷ, ಗಾಯನ, ಸಾಮೂಹಿಕ ನೃತ್ಯ,ಕವಾಲಿ, ಜನಪದ ನೃತ್ಯ, ಗಜಲ್, ಚಿತ್ರಕಲೆ, ಕಥೆ, ಭಾಷಣ, ಭಕ್ತಿಗೀತೆ,ಜನಪದಗೀತೆ, ರಂಗೋಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು.
ಚಟ್ಟಳ್ಳಿ ಕ್ಲಸ್ಟರ್ ಸಿದ್ದಾಪುರದ ಸಂತ ಅನ್ನಮ್ಮ, ಮಲಯಾಳಂ, ಜಿಎಂಪಿ, ಗುಹ್ಯ, ಬಿಜಿಎಸ್,
ಶ್ರೀ ಕೃಷ್ಣ ವಿದ್ಯಾ ಮಂದಿರ, ಚಟ್ಟಳ್ಳಿ, ಕಂಡಕೆರೆ, ಆರ್‌ಎಸ್ ಚೆಟ್ಟಳ್ಳಿ, ಈರಳವಳಮುಡಿ,
ಅಭ್ಯತ್ತ್ ಮಂಗಲ ಸೇರಿದಂತೆ ಇತರ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡಿದ್ದರು.
ಇಕ್ರಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಅಬ್ದುಲ್ ರಜಾಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಶಾಲೆಯ ಪ್ರಧಾನ ಕಾರ್ಯದರ್ಶಿ ಕೆ.ಯು. ಅಬ್ದುಲ್ ಮಜೀದ್, ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ನಮಿತಾ ಅಯ್ಯಪ್ಪ ಸೇರಿದಂತೆ ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.









