ಮಡಿಕೇರಿ ಸೆ.15 : ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸಾಗ್ಯ ಗ್ರಾಮ ನಿವಾಸಿ ಎಂ.ಮಲ್ಲೇಶ(24) ಎಂಬಾತನೇ ಬಂಧಿತ ಆರೋಪಿ. ಈತನ ಬಳಿಯಿಂದ 28 ಗ್ರಾಂ. ಚಿನ್ನಾಭರಣ, 1 ಬೆಳ್ಳಿ ಚೈನ್ ಸಹಿತ ಒಟ್ಟು 1.39 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಮುಡಿ ಗ್ರಾಮದ ರಾಜಕಾಲೋನಿ ನಿವಾಸಿ ಎನ್.ಮಂಜುನಾಥ್ ಅವರು ಇದೇ ಜೂನ್ 17ರಂದು ಬೆಳಗೆ 9 ಗಂಟೆಗೆ ಮನೆಗೆ ಬೀಗ ಹಾಕಿ ಅದರ ಕೀ ಯನ್ನು ಹಿತ್ತಲಿನಲ್ಲಿರುವ ಹೂ ಕುಂಡದಲ್ಲಿಟ್ಟು ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮಲಗುವ ಕೋಣೆಯ ಗಾದ್ರೇಜ್‍ನಲ್ಲಿಟ್ಟಿದ್ದ 1.35 ಲಕ್ಷ ರೂ. ಮೌಲ್ಯದ 28 ಗ್ರಾಂ ಚಿನ್ನಾಭರಣ ಮತ್ತು 4 ಸಾವಿರ ರೂ. ಮೌಲ್ಯದ 1 ಬೆಳ್ಳಿ ಚೈನ್ ಕಳುವಾಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ವಿರಾಜಪೇಟೆ ಡಿವೈಎಸ್‍ಪಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಎ.ವಿ.ಗೋವಿಂದ ರಾಜು, ಪಿಎಸ್‍ಐ ರೂಪಾದೇವಿ, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಎಂ.ಕೆ. ಪೂವಯ್ಯ, ಎಂ. ಚಂದ್ರಶೇಖರ್, ಜಿ.ವಿ.ತೇಜಸ್ ಕುಮಾರ್, ಪಿ.ಎ.ಮಹಮದ್ ಅಲಿ, ಕೆ.ಎ.ಹನೀಫ್ ಮತ್ತು ಬಿ.ಎನ್.ಪುನೀತ್ ಅವರುಗಳು ಸೆ.13ರಂದು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆರೋಪಿ ಬಳಿಯಿದ್ದ 1.39 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಂಡಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ: 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ. ತಂತಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ. ಆಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.








