ಮಡಿಕೇರಿ ಸೆ.15 : ಕೊಡವ ಕೂಟಾಳಿಯಡ ಕೂಟದ ವತಿಯಿಂದ ಪೊನ್ನಂಪೇಟೆ ತಾಲೂಕು ಕಾಕೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಮೆಡಿಕಲ್ ಕಿಟ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೂಟದ ಅಧ್ಯಕ್ಷ ಚಂಗುಲಂಡ ಸೂರಜ್, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಕಾರಣಗಳಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ, ನಮ್ಮ ಕೂಟದ ವತಿಯಿಂದ ಶಾಲೆಯ ಕುಂದು ಕೊರತೆಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದೆಂದು ತಿಳಿಸಿದರು.
ಸಂಘಟನೆಯ ನಿರ್ದೇಶಕ ಬೊಜ್ಜಂಗಡ ಚಂಗಪ್ಪ ಮಾತನಾಡಿ, ಇತ್ತೀಚೆಗೆ ತಮ್ಮ ಊರಿನ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯ ಬಡಮಕ್ಕಳಿಗೆ ನೋಟ್ ಬುಕ್ ಹಾಗೂ ಮತ್ತಿತರ ಶಾಲಾ ಸಾಮಾಗ್ರಿಗಳ ಕೊರತೆಯ ಬಗ್ಗೆ ಮುಖ್ಯೋಪಾಧ್ಯಾಯರು ತಿಳಿಸಿದ್ದು, ಸ್ವಯಂ ಪ್ರೇರಿತರಾಗಿ ಮೆಡಿಕಲ್ ಕಿಟ್ ಹಾಗೂ ನೋಟು ಬುಕ್ ಗಳನ್ನು ನೀಡಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೆಡಿಕಲ್ ಕಿಟ್, ನೋಟ್ ಬುಕ್ ಹಾಗೂ ಇತರ ಸಾಮಾಗ್ರಿಗಳನ್ನು ಶಾಲಾ ಶಿಕ್ಷಕ ವೃಂದದವರಿಗೆ ಹಸ್ತಾಂತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಬಾಚಂಗಡ ಜಯಂತಿ ಮಾತನಾಡಿ, ಶಾಲೆಯಲ್ಲಿ ಹಲವಾರು ಸೌಕರ್ಯದ ಕೊರತೆಯಿರುತ್ತದೆ, ಅದರ ಬಗ್ಗೆ ಗಮನಿಸಿ ಶಾಲೆಗೆ ಉಪಯುಕ್ತ ಸಾಮಾಗ್ರಿಗಳನ್ನು ದೊರಕಿಸಿ ಕೊಟ್ಟ ಕೂಟದ ದಾನಿಗಳಿಗೆ ಧನ್ಯವಾದ ಅರ್ಪಿಸಿದರು.
ಬಳಿಕ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಕೂಟದ ಸ್ಥಾಪಕ ಅಧ್ಯಕ್ಷ’ ಚಿಮ್ಮಚ್ಚಿರ ಪವಿತ ರಜನ್’, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಸಹ ಕಾರ್ಯದರ್ಶಿ ನೂರೇರ ಸರಿತ ಉತ್ತಯ್ಯ, ಖಜಾಂಜಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸದಸ್ಯರಾದ ಕೊಟ್ಟಂಗಡ ಕವಿತಾ ವಾಸುದೇವ್, ಬೊಜ್ಜಂಗಡ ಭವ್ಯ ದಿಲನ್ ಹಾಗೂ ಶಿಕ್ಷಕರಾದ ಕೋಟ್ರಮಾಡ ದಮಯಂತಿ, ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.









