ಮಡಿಕೇರಿ ಸೆ.15 : ಸಾರ್ವಜನಿಕರನ್ನು ಸತಾಯಿಸದೆ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್.ಪವನ್ ಕುಮಾರ್ ಅವರು ಹೇಳಿದ್ದಾರೆ.
ನಗರದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಶುಕ್ರವಾರ ದೂರು ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಆಗಮಿಸಿದಾಗ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಾರ್ವಜನಿಕರನ್ನು ಕುಳಿತು ಮಾತನಾಡಿಸಬೇಕು. ತಮ್ಮ ಹಂತದಲ್ಲಿ ಕೆಲಸ ಆದಲ್ಲಿ ಕಾಲ ಮಿತಿಯಲ್ಲಿ ಮಾಡಿಕೊಡಬೇಕು. ಕೆಲಸ ಆಗದಿದ್ದಲ್ಲಿ ಹಿಂಬರಹವನ್ನಾದರೂ ನೀಡಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಅವರು ಸಲಹೆ ಮಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಮಾಜಿ ಸೈನಿಕರು ಹಾಗೂ ವೃದ್ಧರಿಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡಬೇಕು. ಮಹಿಳೆಯರು ಹಾಗೂ ಇತರರಿಗೆ ಹಲವು ದಾಖಲಾತಿ, ಪ್ರಮಾಣ ಪತ್ರಗಳಿಗೆ ಕಚೇರಿಗೆ ಆಗಮಿಸಿದಾಗ ನಿಯಮಾನುಸಾರ ಕೆಲಸ ಮಾಡಿಕೊಡಬೇಕು ಎಂದರು.
ಪ್ರತೀ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಹೊಂದಿರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಪವನ್ ಕುಮಾರ್ ಅವರು ನಿರ್ದೇಶನ ನೀಡಿದರು.
ಸಾರ್ವಜನಿಕರು ಕಚೇರಿಗೆ ಬಂದಾಗ ಹಲವು ಸಲಹೆ, ಮಾರ್ಗದರ್ಶನ ನೀಡಿದ್ದಲ್ಲಿ ಅಲೆಯುವುದು ತಪ್ಪುತ್ತದೆ. ಆ ನಿಟ್ಟಿನಲ್ಲಿ ಪ್ರಮಾಣ ಪತ್ರ ಅಥವಾ ಇತರೆ ದಾಖಲಾತಿಗೆ ಕಚೇರಿಗೆ ಬಂದಾಗ ಸಾರ್ವಜನಿಕರು ಪರದಾಡದಂತೆ ನೋಡಿಕೊಳ್ಳಬೇಕು. ಕಚೇರಿಗಳಲ್ಲಿ ಅಗತ್ಯ ದಾಖಲಾತಿ ಪಡೆಯಲು ಮಾಹಿತಿಯ ಫಲಕ ಪಟ್ಟಿಯನ್ನು ಕಚೇರಿಯಲ್ಲಿ ಅಳವಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಉಂಟಾಗುವ ಕಿರಿಕಿರಿ ತಪ್ಪುತ್ತದೆ ಎಂದರು.
ಸರ್ಕಾರಿ ನೌಕರರು ಸಮಾಜಕ್ಕೆ ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲಾ ಕಚೇರಿಗಳಲ್ಲಿ ಲೋಕಾಯುಕ್ತ ಫಲಕವನ್ನು ಅಳವಡಿಸಬೇಕು. ದಾಖಲೆ ನೆಪದಲ್ಲಿ ಕಾಲ ವಿಳಂಬ ಮಾಡಬಾರದು ಎಂದು ಲೋಕಾಯುಕ್ತ ಡಿವೈಎಸ್ಪಿ ಅವರು ಹೇಳಿದರು.
ಶುಕ್ರವಾರ ನಡೆದ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ 8 ದೂರು ಅರ್ಜಿಗಳು ದಾಖಲಾಗಿದ್ದು, ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಗೆ ಒಳಪಟ್ಟಿವೆ ಎಂದು ಪವನ್ ಕುಮಾರ್ ಅವರು ತಿಳಿಸಿದರು.
94ಸಿ. ಫೌತಿ ಖಾತೆ, ಆರ್ಟಿಸಿ ತಿದ್ದುಪಡಿ, ಮಳೆ ಹಾನಿ ಪರಿಹಾರ, ಬೀಟೆ ಮರ ಕಡಿಯಲು ಸರ್ವೇ ಮಾಡಿದ್ದು, ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸದಿರುವ ಬಗ್ಗೆ ಮತ್ತಿತರ ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಪ್ರತೀ ತಿಂಗಳ ಎರಡನೇ ಬುಧವಾರ (ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ಅಥವಾ ಪೊನ್ನಂಪೇಟೆ) ಇಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಲಾಗುತ್ತದೆ. ಜೊತೆಗೆ ಪ್ರತೀ ತಿಂಗಳ ಎರಡನೇ ಶುಕ್ರವಾರ ಮಡಿಕೇರಿಯ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು (ಸರ್ಕಾರಿ ರಜೆ ದಿನ ಹೊರತುಪಡಿಸಿ) ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪವನ್ ಕುಮಾರ್ ಅವರು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗೆ 08272-295297 ಹಾಗೂ ಲೋಕಾಯುಕ್ತ ಡಿವೈಎಸ್ಪಿ ಅವರ ಇಲಾಖಾ ಮೊಬೈಲ್ ಸಂಖ್ಯೆ 9364062578 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
Breaking News
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*
- *ಮೂರ್ನಾಡು ಗಜಾನನ ಯುವಕ ಸಂಘ ಖಂಡನೆ*
- *ಅಮಾಯಕರ ಮೇಲಿನ ಹಲ್ಲೆ ಖಂಡನೀಯ : ಮೂರ್ನಾಡು ಆಪ್ತಮಿತ್ರ ಬಳಗ ಅಸಮಾಧಾನ*
- *ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ಪುತ್ತರಿ ಒತ್ತೋರ್ಮೆ ಕೂಟ*