ಮಡಿಕೇರಿ ಸೆ.16 : ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ ಸ್ವಚ್ಛ ಹಾಗೂ ಸುಂದರ ಪರಿಸರವನ್ನು ನಿರ್ಮಿಸಲು ಎಲ್ಲರೂ ಕೈ ಜೋಡಿಸುವಂತೆ ಕೊಡಗು ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ ತಿಳಿಸಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ‘ಸ್ವಚ್ಛತಾ ಹೀ ಸೇವಾ ಆಂದೋಲನದ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದರು.
ಕೊಡಗು ಜಿಲ್ಲೆಯು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದ್ದು, ಇದರ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು 15 ದಿನಗಳ ಕಾಲ ದೇಶಾದ್ಯಂತ ಸ್ವಚ್ಛತೆ ಕುರಿತು ಸ್ವಚ್ಛತೆಯೇ ಸೇವೆ ಎಂಬ ಹೆಸರಿನಲ್ಲಿ ಸ್ವಚ್ಛತಾ ಆಂದೋಲನ ಜರುಗುತ್ತಿದೆ ಎಂದು ತಿಳಿಸಿದರು.
ಇದರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲೆ, ಕಾಲೇಜು, ಅಂಗನವಾಡಿ ಸರ್ಕಾರಿ ಕಚೇರಿಗಳಲ್ಲಿ ಶ್ರಮದಾನ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ. ಅಕ್ರಮವಾಗಿ ತ್ಯಾಜ ಸುರಿವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು. ಪ್ರವಾಸಿತಾಣಗಳಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಜಿಲ್ಲೆಯ ಹಾಡಿಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಿಲ್ಲೆಯಲ್ಲಿ ನಿಷೇಧಿಸಿರುವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಸಿ-ಒಣ ತ್ಯಾಜ್ಯಗಳ ವಿಂಗಡಣೆ ಕುರಿತು ಜನಜಾಗೃತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರೊಂದಿಗೆ ರಸ್ತೆ ಬದಿ ಸ್ವಚ್ಛತೆಯ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್ ಅವರು, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಉದ್ದೇಶದಿಂದ, ನಮ್ಮೆಲ್ಲರ ಆರೋಗ್ಯದ ಹಿತ ದೃಷ್ಟಿಯಿಂದ, ಒಮ್ಮೆ ಉಪಯೋಗಿಸುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುತ್ತೇನೆ. ದಿನ ನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಸದೇ ಪರಿಸರ ಸ್ನೇಹಿ ಕೈಚೀಲ-ವಸ್ತುಗಳನ್ನು ಉಪಯೋಗಿಸುತ್ತೇನೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ನನ್ನ ಮನೆಯ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ, ವಿಲೇವಾರಿ ಮಾಡುತ್ತೇನೆ. ಎಲ್ಲೆಂದರಲ್ಲಿ ಕಸ ಬಿಡದಂತೆ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ಗ್ರಾಮವನ್ನು ಸ್ವಚ್ಛ, ಸುಂದರವನ್ನಾಗಿಸಲು ಶ್ರಮಿಸುತ್ತೇನೆ. ನಮ್ಮ ಸುತ್ತ-ಮುತ್ತಲ ಪರಿಸರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಸಹಕರಿಸುತ್ತೇನೆ ಎಂದು ಜೀವನ್ ಕುಮಾರ್ ಹೇಳಿದರು.
ನನ್ನ ನೆರೆ ಹೊರೆಯವರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ‘ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಶ್ರಮಿಸುತ್ತೇನೆ. ಈ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ಇತರರನ್ನು ಪ್ರೇರೇಪಿಸುತ್ತೇನೆ. ಗ್ರಾಮವನ್ನು ಸ್ವಚ್ಛ-ಸುಂದರ ಹಾಗೂ ಅರೋಗ್ಯವಂತವಾಗಿಸಿ, ಜವಾಬ್ದಾರಿಯುತ ನಾಗರಿಕನಾಗಿ ಸೇವೆ ಮಾಡುವುದಾಗಿ ದೃಢ ಪ್ರತಿಜ್ಞೆ ಮಾಡುತ್ತೇನೆ. ಸ್ವಚ್ಛ ಮೇವ ಜಯತೇ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಡಿಡಿಪಿಐ ಸೌಮ್ಯ ಪೊನ್ನಪ್ಪ, ಜಿಲ್ಲಾ ಎಚ್‍ಆರ್‍ಡಿ ಸಮಾಲೋಚಕರಾದ ಡಿ.ಡಿ.ಪೆಮ್ಮಯ್ಯ, ವಾಸುದೇವು, ಸ್ವಚ್ಛತಾ ಆಂದೋಲನದ ಸಮಾಲೋಚಕರಾದ ಸೂರಜ್, ಹರ್ಷಿತಾ ಇತರರು ಇದ್ದರು.