ಮಡಿಕೇರಿ ಸೆ.16 : ಭಾರತೀಯ ಸೇನೆಯಲ್ಲಿ ಸೇವೆಯಲ್ಲಿರುವಾಗಲೇ ಅನಾರೋಗ್ಯದಿಂದ ನಿಧನ ಹೊಂದಿದ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಯೋಧ ಯು.ಕೆ.ಜಿತನ್ (33) ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನಡೆಯಿತು.
ಸಕಲ ಸೇನಾ ಗೌರವ ಮತ್ತು ಸರ್ಕಾರಿ ಗೌರವಗಳೊಂದಿಗೆ ಜಿತನ್ ಅವರಿಗೆ ನಮನ ಸಲ್ಲಿಸಲಾಯಿತು. ಸುರಿಯುವ ಮಳೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿದ್ದ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಉದಿಯನ ಕಾಳಪ್ಪ ಹಾಗೂ ದಮಯಂತಿ ಅವರ ಪುತ್ರ ಜಿತನ್ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತೀಯ ಸೇನೆಯಲ್ಲಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಜಿತನ್ ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಪ್ರಸ್ತುತ ಎಂಇಜಿ ಸೆಂಟರ್ ನಲ್ಲಿ ನಾಯಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ತಂದೆ, ತಾಯಿಯನ್ನು ಅಗಲಿದ್ದಾರೆ.








