
ವಿರಾಜಪೇಟೆ ಜು.6 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿರಾಜಪೇಟೆ ತಾಲೂಕಿನ ವಿರಾಜಪೇಟೆ ಮತ್ತು ಅಮ್ಮತಿ ವಲಯದ ಕಾರ್ಯಕ್ಷೇತ್ರದಲ್ಲಿ ನೂತನ ‘ಡಿಜಿ ಪೇ’ ಸೇವೆಗೆ ವಿರಾಜಪೇಟೆಯ ಕಚೇರಿಯಲ್ಲಿ ಚಾಲನೆ ದೊರೆಯಿತು. ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ನೇತೃತ್ವದಲ್ಲಿ ತಾಲೂಕಿನಲ್ಲಿ ಈ ವಿನೂತನ ಸೇವೆ ಪ್ರಥಮ ಬಾರಿಗೆ ಆರಂಭಗೊಂಡಿದ್ದು, ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಹರೀಶ್ ಪಿ. ಅವರು ಉದ್ಘಾಟಿಸಿ ಮಾತನಾಡಿ, “ಡಿಜಿ ಪೇ ಸೇವೆಯು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ವಾರದ ನಗದು ಸಂಗ್ರಹಣೆ ದಿನದಂದು ಸದಸ್ಯರು ತಮ್ಮ ಎಟಿಎಂ ಕಾರ್ಡ್ ಅಥವಾ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಬಳಸಿ, ತಮ್ಮ ಬ್ಯಾಂಕ್ ಖಾತೆಯಿಂದ ಸುಲಭವಾಗಿ ರೂ.500 ರಿಂದ ರೂ 10,000 ವರೆಗೆ ನಗದು ಹಣವನ್ನು ಪಡೆಯಬಹುದು. ಸಿಎಸ್‍ಸಿ ಕಾರ್ಯಕ್ರಮದ ಈ ಡಿಜಿಟಲ್ ಸೇವೆಯು ಪ್ರತಿಯೊಬ್ಬ ಗ್ರಾಮೀಣ ಜನರಿಗೂ ತಲುಪಬೇಕು. ಈ ಬಗ್ಗೆ ಒಕ್ಕೂಟದ ಸಭೆಗಳಲ್ಲಿ ಜನರಿಗೆ ಹೆಚ್ಚಿನ ಮಾಹಿತಿ ನೀಡಬೇಕು” ಎಂದು ತಿಳಿಸಿದರು ಇದು ಯೋಜನೆಯ ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಮತ್ತು ಸಂಘದ ಸದಸ್ಯರು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ವಲಯ ಮೇಲ್ವಿಚಾರಕರು, ಹಣಕಾಸು ಪ್ರಬಂಧಕರು, ತಾಲೂಕು ನೋಡಲ್ ಅಧಿಕಾರಿ, ವಿಎಲ್‍ಇ (ಗಿಐಇ), ವಲಯದ ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.









