ನಾಪೋಕ್ಲು ಸೆ.20 : ನಾಪೋಕ್ಲುವಿನ ವಿವಿಧೆಡೆ ವಿವಿಧ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
5 ಸೇವಾ ಸಮಿತಿಗಳ ವತಿಯಿಂದ ಸಂತೆ ಮೈದಾನದಿಂದ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿ ಇರಿಸಿ ವಾದ್ಯ ಮೇಳಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿಸಿ ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಯಿತು.
ಈಡು ಕಾಯಿ ಹೊಡೆಯುವುದರ ಮೂಲಕ ಸಂತೆ ಮೈದಾನದಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಗಣೇಶೋತ್ಸವ ಸಮಿತಿಯ ಪ್ರಮುಖರಾದ ಕಲಿಯಂಡ ವಿಠಲ ಅವರು ದೇಶ ಹಾಗೂ ಧರ್ಮ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ನಿಸ್ವಾರ್ಥ ಸೇವೆಯಿಂದ ಶ್ರಮಿಸುವಂತಾಗಬೇಕೆಂದು ಕರೆ ನೀಡಿದರು.
ನಾಪೋಕ್ಲು ನಲ್ಲಿ ಸುಮಾರು 50 ವರ್ಷಗಳಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇದೀಗ ಎಲ್ಲರಿಗೂ ಅನುಕೂಲವಾಗುವಂತೆ ವಿವಿಧ 5 ಕಡೆಗಳಲ್ಲಿ ಗೌರಿ ಗಣೇಶ ಸಮಿತಿಗಳಿಂದ ಮೂರ್ತಿಗಳನ್ನು ಪ್ರತಿಷ್ಠಾಪನೆಗೊಲಾಗುತ್ತಿದೆ. ಶನಿವಾರದಂದು ಎಲ್ಲಾ ಗಣೇಶೋತ್ಸವ ಸಮಿತಿಗಳಿಂದ ಪ್ರತಿಷ್ಠಾಪನೆಗೊಂಡ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ಮಂಟಪದಲ್ಲಿರಿಸಿ ಮೆರವಣಿಗೆಯೊಂದಿಗೆ ಸಾಗಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದರು.
ಈ ಸಂದರ್ಭ ಇಂದಿರಾ ನಗರದ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಗಣೇಶ ಮೂರ್ತಿಗಳನ್ನು ಇಂದಿರಾನಗರದಲ್ಲಿ, ಶ್ರೀರಾಮ ಟ್ರಸ್ಟ್ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗುರುಪೊನ್ನಪ್ಪ ಸಭಾಂಗಣದಲ್ಲಿ, ಶ್ರೀ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ ಹಳೆ ತಾಲೂಕು ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ, ನಾಪೋಕ್ಲು ನಾಡು ಗೌರಿ ಗಣೇಶ ಸಮಿತಿ ವತಿಯಿಂದ ಹಳೆ ತಾಲೂಕಿನ ಶ್ರೀ ಭಗವತಿ ದೇವಾಲಯದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಕಕ್ಕುಂದ ಕಾಡಿನ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ವೆಂಕಟೇಶ್ವರ ದೇವಾಲಯದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ವಿಶೇಷ ಪೂಜೆ, ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಇಂದಿನಿಂದ ವಿವಿಧ ಸೇವಾ ಸಮಿತಿಗಳ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಗೌರಿ ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ ಸಂದರ್ಭ ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ