ನಾಪೋಕ್ಲು ಸೆ.20 : ಜನರಿಗೆ ದೈನಂದಿನ ಜೀವನದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಮಡಿಕೇರಿ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರಯುಕ್ತ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಸಂಪತ್ತು ಅಥವಾ ಹಣ ಇದ್ದ ಮಾತ್ರಕ್ಕೆ ಅದು ಮುಂದುವರಿದ ದೇಶ ಎಂದು ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ತಾಯಿಯ ಆರೋಗ್ಯ ಮತ್ತು ಮಕ್ಕಳ ಆರೋಗ್ಯ ಬಹಳ ಮುಖ್ಯವಾಗಿದೆ. ಅಭಿವೃದ್ಧಿಯನ್ನು ಆರೋಗ್ಯದ ದೃಷ್ಟಿಯಿಂದ ಅಳೆಯಲಾಗುವುದು ಎಂದರು.
ಮುಂದಿನ ಡಿಸೆಂಬರ್ ವರೆಗೆ ಪ್ರತಿ ಮಂಗಳವಾರ ಆರೋಗ್ಯ ತಪಾಸಣೆ ನಡೆಯಲಿದ್ದು,
ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಪೂವಯ್ಯ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ವ್ಯವಸ್ಥೆ ಆಗಬೇಕಿದೆ. ಬಿಪಿಎಲ್ ಕಾರ್ಡು ಆಯುಷ್ಮಾನ್ ಕಾರ್ಡ್ ಮುಂತಾದ ದಾಖಲೆಗಳನ್ನು ರೋಗಿಗಳು ಸರಿಯಾಗಿ ನೀಡಿದರೆ ಮಾತ್ರ ಸರ್ಕಾರದ ಸೌಲಭ್ಯಗಳು ಸಕಾಲಿಕವಾಗಿ ಒದಗಿಸಲು ಅನುಕೂಲವಾಗಲಿದೆ. ಎಲ್ಲರೂ ದಾಖಲೆಗಳನ್ನು ಸರಿಯಾಗಿ ನೀಡಿದರೆ ಮಾತ್ರ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಿಬ್ಬಂದಿಗಳ ಕೊರತೆಯನ್ನು ನಿವಾರಿಸಲು ಸಂಬಂಧಪಟ್ಟವರು ಶೀಘ್ರ ವ್ಯವಸ್ಥೆ ಕಲ್ಪಿಸಬೇಕೆಂದ ಅವರು ಚಿಕಿತ್ಸೆಗೆ ಬರುವವರು ಸೂಕ್ತ ದಾಖಲಾತಿಗಳನ್ನು ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಉಪಾಧ್ಯಕ್ಷೆ ಹೇಮ ಅರುಣ್ ಬೇಬ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ದಂತ ವೈದ್ಯೆ ನೂರ್ ಫಾತಿಮಾ, ವೈದ್ಯಾಧಿಕಾರಿ ಡಾ. ಜೀವನ್ ಉಪಸ್ಥಿತರಿದ್ದರು. ಅಧಿಕ್ಷಕ ಮಧುಸೂದನ್ ಸ್ವಾಗತಿಸಿ ವಂದಿಸಿದರು.
ಬಳಿಕ ಆರೋಗ್ಯ ಮೇಳದಲ್ಲಿ ತಜ್ಞ ವೈದ್ಯ ಸಿಬ್ಬಂದಿಗಳಿಂದ ಸಾಮಾನ್ಯ ಚಿಕಿತ್ಸೆ, ಕೀಲು ಮತ್ತು ಮೂಳೆ, ದಂತ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ನೇತ್ರ ಪರೀಕ್ಷೆ, ಚರ್ಮ ಚಿಕಿತ್ಸೆ, ಕಿವಿ, ಪ್ರಸೂತಿ ಹಾಗೂ ಸ್ತ್ರೀರೋಗ, ಮಾನಸಿಕ ಆರೋಗ್ಯ ಸೇರಿದಂತೆ ಒಟ್ಟು 191 ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು.
ವರದಿ : ದುಗ್ಗಳ ಸದಾನಂದ