ಸೋಮವಾರಪೇಟೆ, ಸೆ.21 : ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಗೌರಿ – ಗಣೇಶ ಹಬ್ಬದ ಅಂಗವಾಗಿ ಪರಿಸರ ಸ್ನೇಹಿ ಗಣೇಶೋತ್ಸವ: 2023 ವನ್ನು ಆಚರಿಸಲಾಯಿತು.
ಇಕೋ ಕ್ಲಬ್ ಸಂಘಟನೆ ಮೂಲಕ ಶಾಲಾ ಶಿಕ್ಷಕರ ಮಾರ್ಗದರ್ಶನಲ್ಲಿ ನಡೆದ ಜಾಗೃತಿ ಅಭಿಯಾನದಲ್ಲಿ ಮಕ್ಕಳು ಜೇಡಿಮಣ್ಣಿನಿಂದ ವಿವಿಧ ನಮೂನೆಯ ಗಣೇಶ ಮೂರ್ತಿಗಳನ್ನು ತಯಾರಿಸಿ ಪ್ರದರ್ಶಿಸಿ ಗಮನ ಸೆಳೆದರು. ಪಿಓಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ಬಳಕೆ ಮಾಡದಂತೆ ಹಾಗೂ ಮಣ್ಣಿನ ಗಣೇಶ ಮೂರ್ತಿಯ ತಯಾರಿಕೆ ಮತ್ತು ಬಳಕೆಯ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಮಕ್ಕಳು ತಯಾರಿಸಿದ್ದ ಮಣ್ಣಿನ ಗಣೇಶ ಮೂರ್ತಿಗಳನ್ನು
ಗ್ರಾಮದಲ್ಲಿ ಮಕ್ಕಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಯ ಬಳಕೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಶಾಲಾ ಅಂಗಳದಲ್ಲಿನ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.
ಶಾಲಾ ಅಂಗಳದ ಹೊಂಡದಲ್ಲಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಆರ್.ಸುನೀತಾ , ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ನಾವು ಈಗ ಎಲ್ಲೆಡೆ ಮಣ್ಣಿನ ಗಣೇಶನ ಪೂಜೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪಿಒಪಿಯಿಂದ ತಯಾರಿಸಿದ್ದ ದೊಡ್ಡ ಗಣೇಶ ಮೂರ್ತಿಗಳನ್ನು ತ್ಯಜಿಸಲಾಗುತ್ತಿದೆ ಎಂದರು.
ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕ ರಾಜಪ್ಪ ಮಾತನಾಡಿ, ನಮ್ಮ ಆಚರಣೆಯಿಂದ ಜಲ,ನೆಲ,ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ.ಪ್ಲ್ಯಾಸ್ಟರ್ ಆಪ್ ಪ್ಯಾರಿಸ್(ಪಿಓಪಿ) ಗಣೇಶ ವಿಗ್ರಹಗಳನ್ನ ನಾವು ನೀವೆಲ್ಲರೂ ಸ್ವಯಂ ಪ್ರೇರಿತವಾಗಿ ತಿರಸ್ಕರಿಸಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಕಡ್ಡಾಯವಾಗಿ ಬಳಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಶಿಕ್ಷಕ ಸಂತೋಷ್ ಕುಮಾರ್ ಮಾತನಾಡಿ, ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಕೆರೆಗಳು,ನದಿಗಳು ಮತ್ತು ಸಮುದ್ರದ ನೀರು ವಿಷಪೂರಿತವಾಗಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದನ್ನು ತಡೆಗಟ್ಟುವ ಸಲುವಾಗಿ ಇಂತಹ ಜಾಗೃತಿ ಅವಶ್ಯಕತೆ ಇದೆ ಎಂದರು.
ಶಿಕ್ಷಕಿ ಸುಜಾತ, ಶಾಲಾ ಭೋಜನ ಮಾತೆಯರಾದ ರಾಣಿ ಮತ್ತು ಸುನಂದಾ, ಎಸ್ ಡಿ ಎಂ ಸಿ ಅಧ್ಯಕ್ಷ ಅನಿಲ್,ವಿದ್ಯಾರ್ಥಿ ನಾಯಕ ನಿವೇದ್, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.








