ಹೊದ್ದೂರು ಸೆ.8 : ಜಾಣೆ ಗೃಹಿಣಿಯಿಂದ ಕುಟುಂಬದ ಅಪೌಷ್ಠಿಕಾಂಶವು ಮುಕ್ತವಾಗಲಿದೆ. ಈ ನಿಟ್ಟಿನಲ್ಲಿ ಪ್ರತಿ ಮಹಿಳೆಯೂ ತಮ್ಮ ಮಹತ್ತರ ಜವಾಬ್ಧಾರಿಯನ್ನು ಅರಿತು ಕಾರ್ಯತತ್ಪರರಾಗಬೇಕು ಎಂದು ಸಾಹಿತಿ, ಪತ್ರಕರ್ತ ಕೂಡಂಡ ರವಿ ಅಭಿಪ್ರಾಯಿಸಿದರು.
ಹೊದ್ದೂರಿನ ಪಂಚಾಯಿತಿ ಮತ್ತು ಸ್ಥಳೀಯ ಅಂಗನವಾಡಿಗಳ ಸಂಯುಕ್ತಾಶ್ರಯದಲ್ಲಿ ನಡೆದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು “ಸಮತೋಲನ ಆಹಾರದ ಸದ್ಭಳಕೆ” ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮವು ಪಂಚಾಯಿತಿಯ ದಿ. ಕೋರನ ದೇವಯ್ಯ ಸೀತಮ್ಮ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿತವಾಗಿತ್ತು.
ಮಹಿಳೆಯರ ಜಾಣ್ಮೆಯು ಕುಟುಂಬಕ್ಕೆ ವರದಾನವಾಗಲಿದೆ. ಸಮತೋಲನ ಆಹಾರದ ಪಿರಮಿಡ್ ಕುರಿತಂತೆ ಬಹುತೇಕ ಮಹಿಳೆಯರು ಅರಿತಿದ್ದಾರೆ. 2023ರ ವರ್ಷವು ಅಂತರಾಷ್ಟೀಯ ಸಿರಿಧಾನ್ಯಗಳ ವರ್ಷವಾಗಿದೆ. ಇದರ ಮಹತ್ವವನ್ನು ಅರಿತು ಮಾನಿನಿಯರು ಸಿರಿಧಾನ್ಯಗಳನ್ನು ತಮ್ಮ ದೈನಿಕ ಆಹಾರದಲ್ಲಿ ಬಳಸುವಂತಾಗಬೇಕು. ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿ, ಅಡುಗೆಯಲ್ಲಿ ಬಳಸಿ ಕುಟುಂಬದ ಸರ್ವ ಸದಸ್ಯರ ಆರೋಗ್ಯವನ್ನು ಕಾಪಾಡುವ ಮಹತ್ತರ ಹೊಣೆ ಜಾಣೆ ಗೃಹಿಣಿಯ ಮೇಲಿದೆ ಎಂದು ಅವರು ವಿವರವಿತ್ತರು.
ಆಯಾ ಋತುಮಾನದಲ್ಲಿ ಸುಲಭವಾಗಿ ಸ್ಥಳೀಯವಾಗಿ ಲಭ್ಯವಾಗುವ ಹಣ್ಣು ಹಂಪಲುಗಳನ್ನು ಧಾರಾಳವಾಗಿ ಬಳಸಬೇಕು. ಗ್ರಾಮೀಣ ಪ್ರದೇಶದಲ್ಲಿ ನೈಸರ್ಗಿಕವಾಗಿ ದೊರೆಯುವ ಸೊಪ್ಪು- ಸದೆಗಳನ್ನು ಯಥೋಚಿತವಾಗಿ ಬಳಕೆ ಮಾಡಿಕೊಳ್ಳಬೇಕು. ಜತೆಗೆ ಮನೆಯ ಹಿತ್ತಲಲ್ಲಿ ತಾವೇ ಸೊಪ್ಪುಗಳನ್ನು ಬೆಳೆದು ಬಳಸುವುದರಿಂದ ವಿಷ ರಹಿತ ತಾಜಾ ತರಕಾರಿಗಳು ಬಳಸಿದಂತಾಗುತ್ತದೆ. ಇವುಗಳ ಜೊತೆಗೆ ಒಣ ಹಣ್ಣುಗಳನ್ನು ಹಿತಮಿತವಾಗಿ ಬಳಸುವಂತೆ ಸಲಹೆ ನೀಡಿದರು.
ಮಾತ್ರೆಗಳ ಬಳಕೆ : ಅಂಗನವಾಡಿಗಳು ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ದೊರೆಯುವ ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಮುಂತಾದ ಮಾತ್ರೆಗಳೊಂದಿಗೆ ವೈದ್ಯರ ಸಲಹೆಯ ಮೇರೆಗೆ ಮೀನೆಣ್ಣೆಯ ಮಾತ್ರೆಗಳನ್ನು ಬಳಸಲು ಸೂಚಿಸಿದರು. ಇವುಗಳ ಜೊತೆಗೆ ಸ್ಥಳಿಯ ಎಣ್ಣೆ ಗಿರಣಿಗಳಲ್ಲಿ ದೊರೆಯುವ ಫಿಲ್ಟರ್ ಮಾಡದ ತೆಂಗಿನೆಣ್ಣೆಯು ಆರೋಗ್ಯ ವರ್ಧಕವಾಗಿದೆ.ಪ್ರತೀ ದಿನವೂ ಒಬ್ಬೊಬ್ಬರು ತಲಾ ಒಂದೊಂದು ಮೊಟ್ಟೆಗಳನ್ನು ಬಳಸಿ ಆರೋಗ್ಯವಂತರಾಗಬಹುದು. ಇವುಗಳ ಜೊತೆಗೆ ಅಂಗನವಾಡಿಗಳ ಮೂಲಕ ಸರಕಾರದಿಂದ ಉಚಿತವಾಗಿ ದೊರೆಯುವ ಪೌಷ್ಠಿಕಾಂಶದ ಆಹಾರವನ್ನು ಎಲ್ಲರೂ ಸದ್ಭಳಕೆ ಮಾಡುತ್ತಾ ತಮ್ಮ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸುವಂತೆ ರವಿ ಸಲಹೆ ನೀಡಿದರು.
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಶೀಲಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಶಿಷ್ರೂಷಕಿ ತಮ್ಮ ಇಳಖೆಗಳಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್. ಎ. ಹಂಸ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಎ. ಎ. ಅಬ್ದುಲ್ಲಾ , ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.








